ಮೈಸೂರು: ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಕೊಳ್ಳೇಗಾಲ ವನ್ಯಜೀವಿ ವಿಭಾಗದ ಕಗ್ಗಲಿಗುಂಡಿ ಪೋಡು ಎಂಬಲ್ಲಿ ಸೋಮವಾರ(ಜೂನ್ 26) ಚಿರತೆರೊಂದು ಆರು ವರ್ಷದ ಬಾಲಕಿಯನ್ನು ತನ್ನ ಬಾಯಿಯಲ್ಲಿ ಹಿಡಿದು ಕಾಡಿಗೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದೆ. ಈ ವೇಳೆ ಎಚ್ಚೆತ್ತ ಬಾಲಕಿ ತಂದೆ ಹಾಗೂ ಗ್ರಾಮಸ್ಥರು ಚಿರತೆಯ ದವಡೆಯಿಂದ ಬಾಲಕಿಯನ್ನು ರಕ್ಷಿಸಿದ್ದಾರೆ.
ಸೋಮವಾರ ರಾತ್ರಿ ಸುಮಾರು 7.30ರ ಸುಮಾರಿಗೆ ರಾಮು ಅವರ 6 ವರ್ಷದ ಮಗಳು ಸುಶೀಲಾ ಮನೆಯ ಮುಂಭಾಗ ಕುಳಿತಿದ್ದಳು. ಈ ವೇಳೆ ಮನೆ ಬಳಿ ಬಂದ ಚಿರತೆಯೊಂದು ಬಾಲಕಿ ಮೇಲೆ ದಾಳಿ ಮಾಡಿ ಆಕೆಯನ್ನು ಕಾಡಿಗೆ ಎಳೆದೊಯ್ಯಲು ಯತ್ನಿಸಿದೆ. ಇದನ್ನು ಕಂಡ ಸ್ವಲ್ಪ ದೂರದಲ್ಲೇ ಇದ್ದ ರಾಮು ತನ್ನ ಮಗಳನ್ನು ಚಿರತೆ ಬಾಯಲ್ಲಿ ಕಂಡು ಶಾಕ್ ಆಗಿದ್ದಾರೆ. ತಕ್ಷಣ ಜೋರಾಗಿ ಕಿರುಚಾಡಿದ್ದಾರೆ. ಕಿರುಚಾಟದ ಸದ್ದು ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಬಂದಿದ್ದು ಎಲ್ಲರೂ ಸೇರಿ ಚಿರತೆ ಬಾಯಿಂದ ಬಾಲಕಿಯನ್ನು ರಕ್ಷಿಸಿದ್ದಾರೆ.
ರಾಮು ಹಾಗೂ ಗ್ರಾಮಸ್ಥರ ಓಡಾಟದಿಂದ ಬೆಚ್ಚಿಬಿದ್ದ ಚಿರತೆ ಬಾಲಕಿಯನ್ನು ಮನೆ ಸಮೀಪದ 10 ಅಡಿ ಆಳದ ಕಂದಕಕ್ಕೆ ಬಿಸಾಕಿ ಕಾಡಿನತ್ತ ಮರೆಯಾಗಿದೆ. ಆ ಪ್ರದೇಶದಲ್ಲಿ ವಾಸಿಸುವ 45 ಕುಟುಂಬಗಳು ತಮ್ಮ ಮೇಲೆ ಕಾಡು ಪ್ರಾಣಿಗಳು, ಹೆಚ್ಚಾಗಿ ಆನೆಗಳು ಮತ್ತು ಚಿರತೆಗಳು ದಾಳಿ ಮಾಡದಂತೆ ಹಾಗೂ ಒಳನುಗ್ಗದಂತೆ ತಡೆಯಲು ಕಂದಕವನ್ನು ಅಗೆದಿದ್ದಾರೆ.
ಬಾಲಕಿಯನ್ನು ರಕ್ಷಿಸಲಾಯಿತಾದರೂ ರಾಮು, ಆತನ ಪತ್ನಿ ಲಲಿತಾ ಮತ್ತು ಇತರ ಗ್ರಾಮಸ್ಥರು ಇನ್ನೂ ಶಾಕ್ನಲ್ಲೇ ಇದ್ದಾರೆ. ಚಿರತೆ ದಾಳಿ ವೇಳೆ ಬಾಲಕಿಯ ಬಾಯಿ ಹಾಗೂ ಗಂಟಲಿನ ಭಾಗಕ್ಕೆ ಕಚ್ಚಿದ್ದು, ತೀವ್ರ ರಕ್ತಸ್ರಾವವಾಗಿದೆ. ಸಮೀಪದ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.