ಭಾರತೀಯ ಸೇನೆ ಸೇರಿದ ನಟ ರವಿ ಕಿಶನ್ ಮಗಳು ಇಶಿತಾ; ಮಾದರಿ ಆದ ‘ಹೆಬ್ಬುಲಿ’ ವಿಲನ್

ಸೆಲೆಬ್ರಿಟಿ ಮಕ್ಕಳು ಚಿತ್ರರಂಗದಲ್ಲೇ ಮುಂದುವರೆಯಲು ಇಷ್ಟಪಡುತ್ತಾರೆ. ಪಾಲಕರ ಹೆಸರಲ್ಲಿ ಸಿನಿಮಾ ರಂಗಕ್ಕೆ ಬಂದು ಒಂದಷ್ಟು ಸಿನಿಮಾ ಮಾಡುತ್ತಾರೆ. ಆದರೆ, ನಟ, ಸಂಸದ ರವಿ ಕಿಶನ್  ಮಗಳು ಈ ವಿಚಾರದಲ್ಲಿ ಭಿನ್ನ. ಅವರ ಮಗಳು ಇಶಿತಾ ಶುಕ್ಲಾ  ಸೇನೆ ಸೇರಿದ್ದಾರೆ. ಈ ಮೂಲಕ ಎಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಎಲ್ಲರೂ ಇಶಿತಾ ಹಾಗೂ ರವಿ ಕಿಶನ್ ​ಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಈ ವಿಚಾರದಲ್ಲಿ ಕುಟುಂಬ ತೆಗೆದುಕೊಂಡ ನಿರ್ಧಾರ ಶ್ಲಾಘನೀಯ ಎಂದು ಅನೇಕರು ಹೇಳಿದ್ದಾರೆ.

ಸುದೀಪ್ ನಟನೆಯ ‘ಹೆಬ್ಬುಲಿ’ ಸಿನಿಮಾ 2017ರಲ್ಲಿ ರಿಲೀಸ್ ಆಯಿತು. ಈ ಚಿತ್ರದ ಮೂಲಕ ಭೋಜ್​ಪುರಿ ನಟ ರವಿ ಕಿಶನ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಚಿತ್ರದಿಂದ ಅವರಿಗೆ ಸಾಕಷ್ಟು ಹೆಸರು ಬಂತು. ಆ ಬಳಿಕ ಅವರು ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಹಿಂದಿ, ತೆಲುಗು ಚಿತ್ರರಂಗದಲ್ಲೂ ಅವರು ಫೇಮಸ್. ಅಲ್ಲು ಅರ್ಜುನ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ರೇಸ್ ಗುರ್ರಂ’ ಚಿತ್ರದಲ್ಲಿ ಅವರು ಮಾಡಿದ ವಿಲನ್ ಪಾತ್ರ ಸಾಕಷ್ಟು ಗಮನ ಸಳೆಯಿತು. 2019ರ ಲೋಕಸಭೆ ಚುನಾವಣೆಯಲ್ಲಿ ಗೋರಖ್‌ಪುರ ಕ್ಷೇತ್ರದಿಂದ ಬಿಜೆಪಿ ಪರವಾಗಿ ಸ್ಪರ್ಧಿಸಿ ಗೆದ್ದು ಸಂಸದರಾಗಿದ್ದಾರೆ. ಈಗ ರವಿ ಕಿಶನ್ ಮಗಳು ಇಶಿತಾ ಸೇನೆಗೆ ಸೇರಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಅಗ್ನಿಪಥ್ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಇಶಿತಾ  ಭಾರತೀಯ ಸೇನೆ ಸೇರಿದ್ದಾರೆ. ಇದನ್ನು ರವಿ ಕಿಶನ್ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದಾರೆ. ಇಶಿತಾಗೆ ಈಗ ಕೇವಲ 21 ವರ್ಷ. ದೇಶ ಸೇವೆ ಮಾಡುವ ಅವಕಾಶ ಇಶಿತಾಗೆ ಸಿಕ್ಕಿದೆ.