ಪವನ್ ಕಲ್ಯಾಣ್​ಗೆ ಅನಾರೋಗ್ಯ, ವಾರಾಹಿ ಯಾತ್ರೆಗೆ ಅಲ್ಪ ವಿರಾಮ

ತೆಲುಗು ಚಿತ್ರರಂಗದ ಸ್ಟಾರ್ ನಟಪವನ ಕಲ್ಯಾಣ, ಸಿನಿಮಾಗಳಿಂದ ಬಿಡುವು ಪಡೆದು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಆಂಧ್ರಪ್ರದೇಶ ಚುನಾವಣೆ  ಗಮನದಲ್ಲಿಟ್ಟುಕೊಂಡು ತಮ್ಮ ಜನಸೇನಾ ಪಕ್ಷವನ್ನು ಗೆಲ್ಲಿಸಲೇ ಬೇಕೆಂಬ ನಿರ್ಧಾರ ತಳೆದು ರಾಜ್ಯದಾದ್ಯಂತ ಯಾತ್ರೆ ಪ್ರಾರಂಭಿಸಿದ್ದು, ಯಾತ್ರೆಗೆ ವಾರಾಹಿ ಯಾತ್ರೆ ಎಂದು ಹೆಸರಿಟ್ಟಿದ್ದಾರೆ. ವಿಶೇಷ ವಾಹನದಲ್ಲಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ಪವನ್ ಕಲ್ಯಾಣ್​ಗೆ ಇದೀಗ ಅನಾರೋಗ್ಯ ಎದುರಾಗಿದ್ದು, ಈ ಕಾರಣದಿಂದ ಯಾತ್ರೆಗೆ ಅಲ್ಪ ವಿರಾಮ ಬಿದ್ದಿದೆ.

ಪವನ್ ಕಲ್ಯಾಣ್ ಯಾತ್ರೆ ಇಂದು ಭೀಮವರಂ ತಲುಪಿ ಅಲ್ಲಿನ ನಾಯಕರು, ಮುಖಂಡರುಗಳೊಟ್ಟಿಗೆ ಪವನ್ ಕಲ್ಯಾಣ್ ಚರ್ಚೆ ನಡೆಸಬೇಕಿತ್ತು. ಆದರೆ ಪವನ್ ಕಲ್ಯಾಣ್ ಆರೋಗ್ಯದಲ್ಲಿ ವ್ಯತ್ಯಯ ಆಗಿರುವ ಕಾರಣ ಭೀಮವರಂ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಸತತ ಪ್ರಯಾಣ, ನಾಯಕರು ಕಾರ್ಯಕರ್ತರ ಭೇಟಿ, ಭಾಷಣಗಳಿಂದಾಗಿ ಪವನ್ ಕಲ್ಯಾಣ್ ಆರೋಗ್ಯದಲ್ಲಿ ವ್ಯತ್ಯಯವಾಗಿದೆ ಎನ್ನಲಾಗುತ್ತಿದೆ. ಅಭಿಮಾನಿಗಳು ಆತಂಕ ಪಡುವಂಥಹದ್ದೇನೂ ಇಲ್ಲ, ಆದಷ್ಟು ಬೇಗ ಪವನ್ ಕಲ್ಯಾಣ್ ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದು ಅವರ ಯಾತ್ರೆ ಭೀಮವರಂ ತಲುಪಲಿದೆ ಎಂದಿದ್ದಾರೆ ಜನಸೇನಾ ಪಕ್ಷ ಮುಖಂಡರು.

ಪವನ್ ಕಲ್ಯಾಣ್​ರ ವಾರಾಹಿ ಯಾತ್ರೆ ರಾಜ್ಯವೆಲ್ಲ ಸಂಚರಣೆ ಮಾಡಲಿದೆ. ಜೂನ್ 14ರಂದು ಅನ್ನವರಂನಲ್ಲಿ ವಾರಾಹಿ ಯಾತ್ರೆ ಆರಂಭವಾಗಿದ್ದು ಭೀಮವರಂ ತಲುಪಿ ಯಾತ್ರೆ ಮುಗಿಯಲಿದೆ. ಇದು ವಾರಾಹಿ ಯಾತ್ರೆಯ ಮೊದಲ ಹಂತವಾಗಿದ್ದು ಒಟ್ಟು ಮೂರು ಹಂತದಲ್ಲಿ ಯಾತ್ರೆಗಳನ್ನು ಮಾಡಿ ರಾಜ್ಯ ಪರ್ಯಟನೆ ಮಾಡಲಿದ್ದಾರೆ ಪವನ್ ಕಲ್ಯಾಣ್. ಆದರೆ ಮೊದಲ ಯಾತ್ರೆ ಇನ್ನೇನು ಗಮ್ಯ ತಲುಪುವ ಹೊತ್ತಿನಲ್ಲಿಯೇ ಅವರಿಗೆ ಅನಾರೋಗ್ಯ ಕಾಡಿದೆ.

ಪವನ್ ಕಲ್ಯಾಣ್ 2014 ರಲ್ಲಿ ಜನಸೇನಾ ಪಕ್ಷ ಸ್ಥಾಪನೆ ಮಾಡಿದರು. ಆದರೆ ಈವರೆಗೆ ಚುನಾವಣೆಗಳಲ್ಲಿ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿಲ್ಲ. ಈ ವರೆಗೆ ಜನಸೇನಾ ಪಕ್ಷಕ ಒಬ್ಬ ಸದಸ್ಯ ಮಾತ್ರವೇ ಚುನಾವಣೆಯಲ್ಲಿ ಗೆದ್ದಿದ್ದಾರೆ. ಆದರೆ ಈ ಬಾರಿ ಪವನ್ ಹವಾ ಹಿಂದೆಂದಿಗಿಂತಲೂ ತುಸು ಜೋರಾಗಿದೆ. ಮುಂಬರುವ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವನ್ನು ಪವನ್ ಕಲ್ಯಾಣ್ ವಹಿಸಲಿದ್ದಾರೆ ಎಂಬ ಮಾತುಗಳು ಆಂಧ್ರ ರಾಜಕೀಯದಲ್ಲಿ ಕೇಳಿ ಬರುತ್ತಿವೆ.

ಸಿನಿಮಾಗಳಲ್ಲಿಯೂ ಪವನ್ ಕಲ್ಯಾಣ್ ಬ್ಯುಸಿಯಾಗಿದ್ದು, ಪ್ರಸ್ತುತ ಹರಿಹರ ವೀರ ಮಲ್ಲು, ಓಜಿ, ಉಸ್ತಾದ್ ಭಗತ್ ಸಿಂಗ್ ಹಾಗೂ ಬ್ರೋ ಹೆಸರಿನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವುಗಳಲ್ಲಿ ಹರಿಹರ ವೀರ ಮಲ್ಲು ಹಾಗೂ ಉಸ್ತಾದ್ ಭಗತ್ ಸಿಂಗ್ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಬ್ರೋ ಹಾಗೂ ಓಜಿ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಚುನಾವಣೆಗೆ ಮುನ್ನ ಪವನ್​ರ ಕನಿಷ್ಟ ಎರಡು ಸಿನಿಮಾಗಳಾದರೂ ಬಿಡುಗಡೆ ಆಗುವ ಸಾಧ್ಯತೆ ಇದೆ.