ಬೆಂಗಳೂರು: ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯನ್ನು ವಿಧಾನಸೌಧದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ನಂಜಾವಧೂತ ಸ್ವಾಮೀಜಿ ಸರ್ಕಾರ ಪಠ್ಯದಲ್ಲಿ ಎಲ್‍ಕೆಜಿಯಿಂದ ಪಿಜಿವರೆಗೂ ಕೆಂಪೇಗೌಡರ ಪಠ್ಯ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.
ಮುಂದುವರೆದು ಮಾತನಾಡಿದ ಅವರು, ಕೆಂಪೇಗೌಡರ ಫೋಟೋವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಳವಡಿಕೆ ಮಾಡಲು ಸರ್ಕಾರ ಆದೇಶ ಹೊರಡಿಸಬೇಕು. ಲಾಲ್ ಬಾಗ್ ಗೋಪುರದ ಬಳಿ ಕೆಂಪೇಗೌಡರ ಥೀಮ್ ಪಾರ್ಕ್ ಸ್ಥಾಪನೆ ನಿರ್ಮಿಸಬೇಕು. ಇಂಗ್ಲೆಂಡ್‍ನಲ್ಲಿ ಕೆಂಪೇಗೌಡರ ಪುತ್ಥಳಿ ಮಾಡಲು ಅಲ್ಲಿನ ಮೇಯರ್ ಸಿದ್ದರಿದ್ದಾರೆ. ಸರ್ಕಾರ ಪತ್ರ ವ್ಯವಹಾರ ಮಾಡಿ ಅದನ್ನು ಮಾಡಿಸಬೇಕು. ಸಂಕ್ರಾಂತಿ ಹಬ್ಬದ ವೇಳೆ ಕೆಂಪೇಗೌಡರ ಹೆಸರಲ್ಲಿ ಅಂತರಾಷ್ಟ್ರೀಯ ಬೆಂಗಳೂರು ಹಬ್ಬ ಆಚರಿಸಬೇಕು. ಕೆಂಪೇಗೌಡರ ಹೆಸರಲ್ಲಿ ಒಂದು ಜಿಲ್ಲೆ ಸ್ಥಾಪನೆಯಾಗಬೇಕು. ಅವರ ಹೆಸರಲ್ಲಿ ಒಂದು ವಿಶ್ವವಿದ್ಯಾಲಯ ಪ್ರಾರಂಭ ಮಾಡಬೇಕು. ಬೆಂಗಳೂರು ವಿವಿ ಸೆಂಟ್ರಲ್ ಯುನಿವರ್ಸಿಟಿಗೆ ಕೆಂಪೇಗೌಡರ ಹೆಸರಿಡಬೇಕು ಎಂದು ಸರ್ಕಾರವನ್ನ ಒತ್ತಾಯಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ , ಕೆಂಪೇಗೌಡರನ್ನ ಕೇವಲ ಒಕ್ಕಲಿಗರಿಗೆ ಸೀಮಿತ ಮಾಡುವುದು ಬೇಡ. ಅವರು ರಾಷ್ಟ್ರದ ಆಸ್ತಿಯಾಗಿದ್ದಾರೆ. ಬಹಳ ಉತ್ಸಾಹದಲ್ಲಿ ಬೆಂಗಳೂರು ಅಭಿವೃದ್ಧಿ ಖಾತೆ ತೆಗೆದುಕೊಂಡಿದ್ದೇನೆ. ಬೆಂಗಳೂರನ್ನು ಮಾದರಿ ನಗರವನ್ನಾಗಿಸಲು ಸಲಹೆಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ನಿಂತು ಹೋಗಿದ್ದ ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಬಗ್ಗೆ ಪರೋಕ್ಷವಾಗಿ ಸುಳಿವು ಕೊಟ್ಟಿದ್ದಾರೆ.
ಚಂದ್ರಶೇಖರ ಸ್ವಾಮೀಜಿ ಮಾತನಾಡಿ ಡಿ.ಕೆ ಶಿವಕುಮಾರ್ ಅವರು ಕೆಂಪೇಗೌಡರಂತೆ ದಿಟ್ಟ ನಾಯಕ ಎಂದು ಬಣ್ಣಿಸಿದರು. ಅವರು ಮುಖ್ಯಮಂತ್ರಿ ಆಗಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಯುವ ಉದ್ಯಮಿ ನಿತಿನ್ ಕಾಮತ್, ಅಂತಾರಾಷ್ಟ್ರೀಯ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್, ಜಯದೇವ ಹೃದ್ರೋಗ ಸಂಸ್ಥೆಗೆ ಈ ವರ್ಷದ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.