ಚಿಕ್ಕಮಗಳೂರು: ರಸ್ತೆ ಬದಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಗೆ ವೈದ್ಯರು ಚಿಕಿತ್ಸೆ ನೀಡಿ ಹೆರಿಗೆ ಮಾಡಿಸಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಮೂಲತಃ ಅಜ್ಜಂಪುರ ತಾಲೂಕಿನ ಗಡಿರಂಗಾಪುರ ಗ್ರಾಮದ ಯಶೋದಾಗೆ 9 ತಿಂಗಳು ತುಂಬಿತ್ತು. ಬಿ ನೆಗೆಟಿವ್ ರಕ್ತದ ಗುಂಪು ಹೊಂದಿರುವ ಯಶೋದಾ ಚಿಕಿತ್ಸೆಗೆಂದು ಶಿವಮೊಗ್ಗ ದ ಮೆಗ್ಗಾನ್ ಆಸ್ಪತ್ರೆಗೆ ಹೊರಟಿದ್ದರು. ಆಕೆ ಜೊತೆ ಬೇರೊಬ್ಬ ಮಹಿಳೆ ಕೂಡ ಇದ್ದರು. ಅಜ್ಜಂಪುರದಿಂದ ತರೀಕೆರೆಗೆ ಬಂದು ಶಿವಮೊಗ್ಗ ತೆರಳಲು ಬಸ್ ಕಾಯುವಾಗ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆಗ ಸ್ಥಳದಲ್ಲಿದ್ದ ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ.
ಮಹಿಳೆ ಆಸ್ಪತ್ರೆ ಮುಟ್ಟುವ ಮುನ್ನವೇ ಆಸ್ಪತ್ರೆಯ ತುಸು ದೂರದಲ್ಲಿ ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಅದೇ ಮಾರ್ಗದಲ್ಲಿ ಹೋಗುತ್ತಿದ್ದ ತಾಲೂಕು ವೈದ್ಯಾಧಿಕಾರಿ ಹಾಗೂ ಮೂಳೆ ತಜ್ಞ ಆರ್. ದೇವರಾಜ್ ಆಕೆಯನ್ನ ಆಸ್ಪತ್ರೆಗೆ ಸೇರಿಸಿ ಪ್ರಸೂತಿ ವೈದ್ಯ ನಟರಾಜ್ ಅವರನ್ನ ಕರೆಸಿ ಹೆರಿಗೆ ಮಾಡಿಸಿದ್ದು, ಇದೀಗ ತಾಯಿ ಹಾಗೂ ಹೆಣ್ಣು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಯಶೋದಾ ಬಿ ನೆಗೆಟಿವ್ ಸಿಗುವುದು ತುಂಬಾ ಕಡಿಮೆ ಎಂದು ರಕ್ತಕ್ಕಾಗಿಯೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೋಗುತ್ತಿದ್ದರು. ವೈದ್ಯರು ನಿನಗೆ ಯಾವುದೇ ಸಮಸ್ಯೆ ಆಗುವುದಿಲ್ಲ, ನಾವಿದ್ದೇವೆ ಎಂದು ಧೈರ್ಯ ತುಂಬಿ ಹೆರಿಗೆ ಮಾಡಿಸಿದ್ದಾರೆ. ಆರಂಭದ ಮೂರು ತಿಂಗಳು ಖಾಸಗಿ ಆಸ್ಪತ್ರೆಗೆ ತೋರಿಸಿದ್ದ ಯಶೋದಾ ಅಲ್ಲಿ ಹೆರಿಗೆಗೆ 30,000 ಹಣ ಕೇಳಿದರು ಎಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೋಗುತ್ತಿದ್ದರು. ಸರ್ಕಾರಿ ಆಸ್ಪತ್ರೆ ವೈದ್ಯರ ಕೆಲಸಕ್ಕೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಶೋದಾ ಕೂಡ ತರೀಕೆರೆ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾಳೆ.