ಬೆಂಗಳೂರು: ಇಂದು (ಜೂ.26) ವಿಶ್ವ ಮಾದಕ ವಸ್ತು ವಿರೋಧಿ ದಿನ ಇತ್ತೀಚಿನ ವರ್ಷಗಳಲ್ಲಿ ಯುವಕರು ಮಾದಕ ದ್ರವ್ಯ ವ್ಯಸನಿಗಳಾಗುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ಶಿಸ್ತು ಕ್ರಮಗಳನ್ನು ಕೈಗೊಂಡಿದ್ದಾರೆ. ಬೆಂಗಳೂರು ಪೊಲೀಸರು ಕಳೆದ ಒಂದು ವರ್ಷದಲ್ಲಿ 1,933 ಪ್ರಕರಣಗಳು ದಾಖಲಿಸಿ 57 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ.
ಹೀಗೆ ವಶಪಡಿಸಿಕೊಂಡ ಮಾದಕ ವಸ್ತುಗಳಲ್ಲಿ 3746 ಕೆಜಿ ಗಾಂಜಾ, 167 ಕೆಜಿ ಇತರೆ ಡ್ರಗ್ಸ್, ಸಿಂಥೆಟಿಕ್ ಕೂಡ ಇದೆ. ಆರೋಪಿಗಳು ಅಂತರಾಜ್ಯ ಮತ್ತು ವಿದೇಶಗಳಿಂದ ಬೆಂಗಳೂರಿಗೆ ಡ್ರಗ್ಸ್ ತಂದು ಮಾರಾಟ ಮಾಡುತ್ತಿದ್ದರು. ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು, ಗೋವಾ, ಆಫ್ರಿಕಾ ಹಾಗೂ ಡಾರ್ಕ್ ವೆಬ್ನಿಂದ ಬರುವ ಜನರು ನಗರದಲ್ಲಿ ಡ್ರಗ್ಸ್ ಮಾರುತ್ತಿದ್ದರು.
ಇವರು ಯುವತಿಯರು, ಟೆಕ್ಕಿಗಳು, ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಇಂದು ಮಾದಕವಸ್ತು ಮಾರಾಟ & ಸೇವನೆ ವಿರೋಧಿ ದಿನ ಹಿನ್ನೆಲೆ ವಶಪಡಿಸಿಕೊಂಡ ಮಾದಕವಸ್ತುಗಳನ್ನು ಪೊಲೀಸರು ದಾಬಸ್ಪೇಟೆಯ ಕೈಗಾರಿಕಾ ಪ್ರದೇಶದಲ್ಲಿ ನಾಶಪಡಿಸಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಬೆಂಗಳೂರು ಪೊಲೀಸರು ಮಾದಕ ವ್ಯಸನಿ ಹಾಗೂ ಮಾರಾಟಗಾರರ ವಿರುದ್ಧ ಸಮರ ಸಾರಿದ್ದು, ಅನೇಕರನ್ನು ಬಂಧಿಸಿದ್ದಾರೆ. ಇತ್ತೀಚಿಗೆ ನಗರದ ಬಾರ್ ಹಾಗೂ ಪಬ್ಗಳ ಮೇಲೆ ದಾಳಿ ಮಾಡಿ ಮಾದಕ ವ್ಯಸನಿಗಳಾಗಿದ್ದ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದರು. ಅಲ್ಲದೇ ಮಾದಕವಸ್ತು ಮಾರಾಟ ಮತ್ತು ಸೇವನೆಯಲ್ಲಿ ತೊಡಗಿದ್ದ ಅನೇಕ ವಿದೇಶಿಯರನ್ನು ಗಡೀಪಾರು ಮಾಡಿದ್ದಾರೆ.
ಮೇ ಕೊನೆಯ ವಾರದಲ್ಲಿ ಅಧಿಕಾರ ವಹಿಸಿಕೊಂಡ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ಮೋಹನ್ ಅವರು ಮುಂದಿನ ವರ್ಷಗಳಲ್ಲಿ ಬೆಂಗಳೂರನ್ನು ಮಾದಕ ದ್ರವ್ಯ ಮುಕ್ತ ನಗರವನ್ನಾಗಿ ಮಾಡಲು ಇಲಾಖೆಗೆ ನಿರ್ದೇಶನ ನೀಡಿದರು.
ನಂತರ ಮಾತನಾಡಿದ ಅವರು, ಇಂದು ಎಲ್ಲ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಬೆಂಗಳೂರಿನಲ್ಲಿ ಡ್ರಗ್ಸ್ ಹಾವಳಿ ಮತ್ತು ಅದನ್ನು ನಿಭಾಯಿಸುವ ಬಗ್ಗೆ ಚರ್ಚಿಸಿದ್ದೇವೆ. ಬೆಂಗಳೂರು ಶೀಘ್ರದಲ್ಲೇ ಮಾದಕ ದ್ರವ್ಯ ಮುಕ್ತ ನಗರವಾಗಲಿದ್ದು, ಅದಕ್ಕಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾವು ಯೋಜನೆಯನ್ನು ಹೊಂದಿದ್ದೇವೆ ಮತ್ತು ಮುಂಬರುವ ತಿಂಗಳುಗಳಲ್ಲಿ ನಾವು ಎಲ್ಲಾ ಪೆಡ್ಲರ್‌ಗಳನ್ನು ವಶಪಡಿಸಿಕೊಳ್ಳುತ್ತೇವೆ ಎಂದರು.