ನವದೆಹಲಿ: ದೇಶದ 15ನೇ ರಾಷ್ಟ್ರಪತಿಯಾಗಿ ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಪದಗ್ರಹಣ ಮಾಡಿದರು. ಬೆಳಗ್ಗೆ 10.15ಕ್ಕೆ ನಡೆದ ಸರಳ ಸಾಂಪ್ರದಾಯಿಕ ಸಮಾರಂಭದಲ್ಲಿ ಮುರ್ಮು ಪ್ರಮಾಣ ವಚನ ಸ್ವೀಕರಿಸಿದರು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೂತನ ರಾಷ್ಟ್ರಪತಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಬಳಿಕ ದೇಶದ ಪ್ರಥಮ ಪ್ರಜೆಯಾಗಿ ದ್ರೌಪದಿ ಮುರ್ಮು ಸೆಂಟ್ರಲ್ ಹಾಲ್‌ನಲ್ಲಿ ಮೊದಲ ಭಾಷಣ ಮಾಡಿದರು.
ಪ್ರಮಾಣವಚನದ ಬಳಿಕ ಮಾತನಾಡಿದ ಮುರ್ಮು, ಸ್ವತಂತ್ರ ಭಾರತವು ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಹೊತ್ತಿನಲ್ಲಿ ನಾನು ರಾಷ್ಟ್ರಪತಿಯಾಗಿರುವುದು ತುಂಬಾ ಸಂತಸ ತಂದಿದೆ. ನನ್ನ ಗ್ರಾಮದಲ್ಲಿ ಕಾಲೇಜಿಗೆ ಹೋದ ಮೊದಲ ಮಹಿಳೆ ನಾನು. ವಾರ್ಡ್ ಕೌನ್ಸಿಲರ್ನಿಂದ ರಾಷ್ಟ್ರಪತಿ ಹುದ್ದೆಗೆ ಬಂದಿದ್ದೇನೆ. ಭಾರತದ ಪ್ರಭಾಪ್ರಭುತ್ವದ ಶಕ್ತಿಯಿಂದ ಇದೆಲ್ಲವೂ ಸಾಧ್ಯವಾಯಿತು. ದೇಶದ ಬಡವರು, ಮಹಿಳೆಯರ ಪ್ರತಿನಿಧಿಯಾಗಿ ಇರುತ್ತೇನೆ ಎಂದು ಹೇಳಿದರು.
ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ಮಂತ್ರಿಮಂಡಲದ ಸದಸ್ಯರು, ರಾಜ್ಯಪಾಲರು, ಮುಖ್ಯಮಂತ್ರಿಗಳು, ರಾಜತಾಂತ್ರಿಕ ನಿಯೋಗಗಳು, ಸಂಸತ್ತಿನ ಸದಸ್ಯರು ಮತ್ತು ಭಾರತ ಸರ್ಕಾರದ ಪ್ರಧಾನ ಸಿವಿಲ್ ಮತ್ತು ಮಿಲಿಟರಿ ಅಧಿಕಾರಿಗಳು ಇಂದು ಸಮಾರಂಭದಲ್ಲಿ ಭಾಗವಹಿಸಿದರು.
ಸಂತಾಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ದ್ರೌಪದಿ ಮುರ್ಮು, ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಉಪರಬೇಡ ಗ್ರಾಮದ ಕುಸುಮಿ ಪ್ರದೇಶದಲ್ಲಿ 1958ರ ಜೂ 20ರಂದು ಜನಿಸಿದರು. ಅವರ ತಂದೆ ಮತ್ತು ತಾತ ಗ್ರಾಮ ಪಂಚಾಯಿತಿಯ ಮುಖ್ಯಸ್ಥರಾಗಿದ್ದರು. ಕಲಾ ವಿಷಯದಲ್ಲಿ ಪದವೀಧರೆಯಾದ ಮುರ್ಮು ಕೆಲ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇನ್ನು ಕಳೆದ ಜುಲೈ 21ರಂದು ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ 64 ವರ್ಷದ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಆಯ್ಕೆಯಾದ ಮೊದಲ ಬುಡಕಟ್ಟು ಸಮುದಾಯದ ನಾಯಕಿ ಎಂಬ ಹೊಸ ಇತಿಹಾಸವನ್ನು ದ್ರೌಪದಿ ಮುರ್ಮು ಬರೆದರು.
ದ್ರೌಪದಿ ಮುರ್ಮು ಪ್ರತಿಭಾ ಪಾಟೀಲ್ ನಂತರ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆ ಏರಿದ ಎರಡನೇ ಮಹಿಳೆ ಹಾಗೂ ಮೊದಲ ಬುಡಕಟ್ಟು ಜನಾಂಗದ ಮಹಿಳೆಯಾಗಿದ್ದಾರೆ. ಸ್ವಾತಂತ್ರ‍್ಯದ ನಂತರ ಮೊದಲ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ.