ಸಿನಿಮೀಯ ರೀತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಕಿಡ್ನಾಪ್ ಮಾಡಿ ಹಲ್ಲೆ; ಪ್ರೇಯಸಿ ಸೇರಿ 6 ಜನರ ವಿರುದ್ಧ ದೂರು ದಾಖಲು

ಚಿಕ್ಕಬಳ್ಳಾಪುರ: ಸಾಫ್ಟ್ ವೇರ್ ಇಂಜಿನಿಯರ್​ನನ್ನು ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ ಮಾಡಿ ದರೋಡೆ ಮಾಡಿ ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಪ್ರೀತಿಸಿದ ಯುವತಿಯಿಂದಲೇ ಕಿಡ್ನಾಪ್​ಗೆ ಸುಪಾರಿ ನೀಡಲಾಗಿದ್ದು ಯುವತಿ ಸೇರಿ 6 ಜನರ ವಿರುದ್ಧ ನಂದಿಗಿರಿಧಾಮ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಜಯಸಿಂಗ್ (32) ಹಲ್ಲೆಗೆ ಒಳಗಾದವರು.

ಮೂಲತಃ ಆಂಧ್ರದ ಅನಂತಪುರ ನಿವಾಸಿಯಾಗಿರುವ ವಿಜಯಸಿಂಗ್, ಬೆಂಗಳೂರಿನ ಖಾಸಗಿ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಜಯ ಸಿಂಗ್ ಪ್ರಿಯತಮೆ ಭಾವನಾ ರೆಡ್ಡಿ, ಕೆಲ ದುಷ್ಕರ್ಮಿಗಳಿಗೆ ಕಿಡ್ನಾಪ್​ ಮಾಡಲು ಸುಪಾರಿ ನೀಡಿದ್ದಳು. ಅದರಂತೆ ಕಿಡಿಗೇಡಿಗಳು ಮೊದಲು ಜೂನ್ 16ರಂದು ಪ್ರಿಯತಮೆ ಮೂಲಕ ದೇವಹಳ್ಳಿಗೆ ಕರೆಸಿ ಕಿಡ್ನಾಪ್ ಮಾಡಿ ನಂದಿಗಿರಿಧಾಮದ ಬಳಿ ಇರುವ ಕ್ಯೂ.ವಿ.ಸಿ ವಿಲ್ಲಾ ರೇಸಾರ್ಟ್​ಗೆ ಕರೆದುಕೊಂಡು ಹೋಗಿದ್ದಾರೆ.

ಬಳಿಕ ಜೂನ್ 18ರ ವರೆಗೂ ಮೂರು ದಿನಗಳ ಕಾಲ ಚಿತ್ರ ಹಿಂಸೆ ನೀಡಿದ್ದಾರೆ. ಜೊತೆಗೆ ವಿಜಯಸಿಂಗ್ ಬಳಿ ಇದ್ದ ಎರಡು ಲ್ಯಾಪ್ ಟಾಪ್, ಮೂರು ಮೊಬೈಲ್, 12 ಗ್ರಾಂ ಬಂಗಾರದ ಚೈನ್ ಸೇರಿದಂತೆ 21 ಲಕ್ಷ ರೂಪಾಯಿ ಹಣ ವರ್ಗಾಯಿಸಿಕೊಂಡಿದ್ದಾರೆ. ಸದ್ಯ ಈ ಸಂಬಂಧ ವಿಜಯಸಿಂಗ್ ಪ್ರಿಯತಮೆ ಸೇರಿ 6 ಜನರ ವಿರುದ್ದ ದೂರು ದಾಖಲಾಗಿದೆ. ಭಾವನಾ ರೆಡ್ಡಿ, ಪುಲ್ಲಾರೆಡ್ಡಿ, ಸುಬ್ರಮಣಿ, ನಾಗೇಶ ರೆಡ್ಡಿ, ಸಿದ್ದೇಶ, ಸುದೀರ್ ವಿರುದ್ದ ಐ.ಪಿ.ಸಿ ಸೆಕ್ಷನ್ -506,341,504,143,149,384,323,324ರ ಅಡಿ ದೂರು ದಾಖಲಾಗಿದೆ.