ಬೆಳಗಾವಿಯಲ್ಲಿ ಬತ್ತಿದ ಘಟಪ್ರಭಾ – ಲಕ್ಷಾಂತರ ಮೀನುಗಳ ಸಾವು

ಬೆಳಗಾವಿ: ಮಳೆ ಇಲ್ಲದೆ ಘಟಪ್ರಭಾ ನದಿ ಬತ್ತುತ್ತಿದ್ದು, ಲಕ್ಷಾಂತರ ಮೀನುಗಳು ಸಾವಿಗೀಡಾದ ಘಟನೆ ಗೋಕಾಕ್‍ನ ನಲ್ಲಾನಟ್ಟಿ ಗ್ರಾಮದಲ್ಲಿ ನಡೆದಿದೆ.

ಜೂನ್ ಅಂತ್ಯಕ್ಕೆ ಬಂದರೂ ರಾಜ್ಯದಲ್ಲಿ ಮುಂಗಾರು ಆರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ನದಿಗಳು ಬತ್ತುತ್ತಿವೆ. ಅದೇ ರೀತಿ ಘಟಪ್ರಭಾ ನದಿ ಸಹ ಬತ್ತಿ ಹೋಗಿದ್ದು, ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಲಕ್ಷಾಂತರ ಸಂಖ್ಯೆಯಲ್ಲಿ ಮೀನುಗಳು ಸಾವಿಗೀಡಾಗುತ್ತಿವೆ. 

ಅಲ್ಲದೇ ಬಳೋಬಾಳ, ಬೀರನಗಟ್ಟಿ ಗ್ರಾಮಗಳ ಬಳಿ ಕೂಡ ಮೀನುಗಳು ಸಾಯುತ್ತಿವೆ. ಇದರಿಂದ ನದಿಯಲ್ಲಿ ದುರ್ವಾಸನೆ ಬರುತ್ತಿದ್ದು, ಗ್ರಾಮಗಳಲ್ಲಿ ರೋಗ ಹರಡುವ ಭೀತಿ ಶುರುವಾಗಿದೆ. ಇನ್ನೂ ಮಳೆ ಆರಂಭಗೊಳ್ಳುವುದು ವಿಳಂಬವಾದರೆ ಮೀನುಗಳ ಸಾವಿನ ಸಂಖ್ಯೆಯಲ್ಲಿ ಹಚ್ಚಳವಾಗಲಿದೆ. ಕುಡಿಯಲು ಹಾಗೂ ಕೃಷಿಗೆ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.