ಪ್ರಾಣ ಉಳಿಸಬೇಕಾದ ಪರಿಸ್ಥಿತಿ ಬಂದಾಗ ಕುಟುಂಬಸ್ಥರೆಲ್ಲ ಒಂದಾಗ್ತಾರೆ. ತಮ್ಮೆಲ್ಲ ಕೆಲಸವನ್ನು ಬದಗಿಟ್ಟು ಕುಟುಂಬಸ್ಥರನ್ನು ಉಳಿಸಲು ಪ್ರಯತ್ನಪಡ್ತಾರೆ. ಹಣ, ಸಮಯವನ್ನು ರೋಗಿಗೆ ಮೀಸಲಿಡುತ್ತಾರೆ. ಇದು ನಮಗೆಲ್ಲ ತಿಳಿದಿರುವ ವಿಷ್ಯ. ಆದ್ರೆ ವೈದ್ಯಕೀಯ ಕ್ಷೇತ್ರದಲ್ಲಿ ನಡೆದ ಈ ಘಟನೆ ಸ್ವಲ್ಪ ಭಿನ್ನವಾಗಿದೆ. ರೋಗಿಗಳನ್ನು ಉಳಿಸಲು ಇಲ್ಲಿ 6 ಕುಟುಂಬಗಳು ಒಂದಾಗಿವೆ. ತಮ್ಮವರನ್ನು ಉಳಿಸಿಕೊಳ್ಳಲು ಇವರೆಲ್ಲ ಕಿಡ್ನಿಯನ್ನು ಅದಲು ಬದಲು ಮಾಡಿಕೊಂಡಿದ್ದಾರೆ. ಕುಟುಂಬಸ್ಥರಿಗೆ ಕಿಡ್ನಿ ದಾನಿಗಳು ಸಿಕ್ಕಿದ್ದರು. ಆದ್ರೆ ಯಾವ ದಾನಿಯ ಕಿಡ್ನಿಯೂ ರೋಗಿ ಗೆ ಹೊಂದಿಕೆಯಾಗ್ತಿರಲಿಲ್ಲ. ಹಾಗಾಗಿ ತಮ್ಮಲ್ಲಿಯೇ ಕಿಡ್ನಿ ಅದಲು ಬದಲು ಮಾಡಿಕೊಳ್ಳುವ ಮೂಲಕ ರೋಗಿಗಳನ್ನು ಉಳಿಸಿದ್ದಾರೆ.
ಯಾರು –ಯಾರಿಗೆ ನೀಡಿದ್ರು ಕಿಡ್ನಿ ? : ಜೈಪುರ ಆಸ್ಪತ್ರೆಗೆ ದಾಖಲಾಗಿದ್ದ ಬಹರೋಡ್ ನಿವಾಸಿ ನಿಶಾಂತ್ ಗೆ ಕಿಡ್ನಿ ಅವಶ್ಯಕತೆಯಿತ್ತು. ನಿಶಾಂತ್ ರಕ್ತದ ಗುಂಪು ಬಿ ಪಾಸಿಟಿವ್ ಆಗಿತ್ತು. ನಿಶಾಂತ್ ಗೆ ಕಿಡ್ನಿ ನೀಡಲು ಮುಂದಾಗಿದ್ದ ತಾಯಿ ಲಲಿತಾ ದೇವಿ ರಕ್ತದ ಗುಂಪು ಒ ಪಾಸಿಟಿವ್ ಆಗಿತ್ತು. ಅವರ ಕಿಡ್ನಿ ನಿಶಾಂತ್ ಗೆ ಹೊಂದಿಕೆಯಾಗ್ತಿರಲಿಲ್ಲ. ಉತ್ತರ ಪ್ರದೇಶದ ಮೈನ್ಪುರಿ ನಿವಾಸಿ ಸರಿತಾ ದೇವಿ, ನಿಶಾಂತ್ ಗೆ ಕಿಡ್ನಿ ನೀಡಲು ಮುಂದಾದ್ರು. ಆದ್ರೆ ಸರಿತಾ ದೇವಿ ಪತಿ ಕೂಡ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರಿಗೆ ಸೂಕ್ತ ಕಿಡ್ನಿ ದಾನಿ ಸಿಕ್ಕಿರಲಿಲ್ಲ. ಸರಿತಾ ಕಿಡ್ನಿ ಪತಿಗೆ ಹೊಂದಿಕೆಯಾಗ್ತಿರಲಿಲ್ಲ. ಇಬ್ಬರ ರಕ್ತ ಬೇರೆಯಾಗಿತ್ತು. ಸರಿತಾ ಪತಿ ದಿನೇಶ್ ಯಾದವ್ ಗೆ ದಿಡ್ವಾನದ ಸ್ವರೂಪ್ ಕನ್ವರ್ ಕಿಡ್ನಿ ದಾನ ಮಾಡಿದ್ರು. ಹಾಗೆ ಸ್ವರೂಪ್ ಕನ್ವರ್ ಮಗನಿಗೆ ಶ್ರೀಗಂಗಾನಗರದ ಗೌರಿ ಶಂಕರ್ ಅವರಿಂದ ಕಿಡ್ನಿ ಪಡೆಯಲಾಗಿತ್ತು. ಇನ್ನು ಗೌರಿ ಶಂಕರ್ ಅವರ ಪತ್ನಿ ರಜನಿ ಶರ್ಮಾಗೆ ಜುಂಜುನುವಿನ ಮುನ್ನಿ ದೇವಿ ಅವರಿಂದ ಕಿಡ್ನಿ ನೀಡಲಾಯ್ತು.
ದೇವಿ ಪುತ್ರಿ ಪ್ರೀತಿ ಸೋನಿ ಅವರು ಜೈಪುರ ನಿವಾಸಿ ರಮೇಶ್ ಚಂದ್ ಅವರಿಂದ ಕಿಡ್ನಿ ಪಡೆದ್ರು. ಇನ್ನು ರಮೇಶ್ ಚಂದ್ ಅವರ ಸಂಬಂಧಿ ಉಷಾ ಶಾಕ್ಯಾ ಅವರು ಲಲಿತಾ ದೇವಿಯಿಂದ ಮೂತ್ರಪಿಂಡವನ್ನು ಪಡೆದರು. ಒಟ್ಟಿನಲ್ಲಿ ಆರು ಕುಟುಂಬದ ಜನರು ಕಿಡ್ನಿಯನ್ನು ಬದಲಾಯಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ಒಂದೇ ಆಸ್ಪತ್ರೆಯಲ್ಲಿ ಈ ಎಲ್ಲ ಕಿಡ್ನಿ ಕಸಿ ನಡೆದಿದೆ. ಅದೂ ಒಂದೇ ದಿನ ನಡೆದಿರೋದು ಬಹಳ ವಿಶೇಷ. ಒಂದೇ ದಿನ ಒಂದೇ ಆಸ್ಪತ್ರೆಯಲ್ಲಿ ಆರು ಮಂದಿಗೆ ಕಿಡ್ನಿ ಸರಿ ಶಸ್ತ್ರಚಿಕಿತ್ಸೆ ನಡೆದಿರುವುದು ಬಹಳ ಅಪರೂಪ ಎನ್ನಬಹುದು.
12 ಗಂಟೆಗಳ ಕಾಲ ನಡೀತು ಕಿಡ್ನಿ ಶಸ್ತ್ರಚಿಕಿತ್ಸೆ : ಕಿಡ್ನಿ ದಾನಿ ಕಿಡ್ನಿ ದಾನ ಮಾಡಲು ಸಿದ್ಧವಾಗಿದ್ದು, ರಕ್ತ ಹೊಂದಾಣಿಕೆಯಾಗ್ತಿಲ್ಲ ಎಂದಾಗ ಬೇಸರವಾಗುತ್ತದೆ. ಇಂಥ ಸಂದರ್ಭದಲ್ಲಿ ಸ್ವಾಪ್ ಕಿಡ್ನಿ ದಾನದ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿ ಹಾಗೂ ದಾನಿ ಇಬ್ಬರೂ ಇದ್ದಾಗ ಸ್ವಾಪ್ ಕಿಡ್ನಿ ಕಸಿ ಮಾಡಲು ಸಾಧ್ಯವೆಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಸರ್ಜರಿ ಸವಾಲಿನದ್ದಾಗಿತ್ತು. ಯಾಕೆಂದ್ರೆ ಒಂದೇ ದಿನ ಎಲ್ಲರ ಶಸ್ತ್ರಚಿಕಿತ್ಸೆ ನಡೆಯಬೇಕಿತ್ತು. ನಾಲ್ಕು ಆಪರೇಷನ್ ಥಿಯೇಟರ್ ನಲ್ಲಿ ಬೆಳಿಗ್ಗೆ 8 ಗಂಟೆಯಿಂದ ಆಪರೇಷನ್ ಶುರುವಾಗಿತ್ತು. ಆಪರೇಷನ್ 12 ಗಂಟೆಗಳವರೆಗೆ ನಡೀತು. ರಾತ್ರಿ 8 ಗಂಟೆ ಸುಮಾರಿಗೆ ಎಲ್ಲ ಕೆಲಸ ಪೂರ್ಣಗೊಂಡಿತ್ತು ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ. ನಾಲ್ಕೈದು ದಿನ ಆಸ್ಪತ್ರೆಯಲ್ಲಿದ್ದ ರೋಗಿ ಹಾಗೂ ದಾನಿಗಳು ಮನೆಗೆ ವಾಪಸ್ ಹೋಗಿದ್ದಾರೆ. ಎಲ್ಲರೂ ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ಮೂಲಗಳು ಹೇಳಿವೆ.