ವ್ಹೀಲಿಂಗ್ ಮಾಡಿ ಶಾಲಾ – ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಮೂವರ ಬಂಧನ

ಹಾಸನ: ವ್ಹೀಲಿಂಗ್ ಮಾಡಿಕೊಂಡು ಶಾಲಾ ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಮೂವರು ಕಿಡಿಗೇಡಿಗಳನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.

ಕಿಡಿಗೇಡಿಗಳಿಂದ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಮಹಿಳಾ ಠಾಣೆ ಪಿಎಸ್‍ಐ ಕುಸುಮಾ ಸಿಬ್ಬಂದಿಗಳೊಂದಿಗೆ ಬಸಟ್ಟಿಕೊಪ್ಪಲು ರಸ್ತೆಯಲ್ಲಿ ಗಸ್ತಿನಲ್ಲಿದ್ದರು. ಈ ವೇಳೆ ಮೂವರು ಬೈಕ್‍ನಲ್ಲಿ ವ್ಹೀಲಿಂಗ್ ಮಾಡಿಕೊಂಡು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದರು ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನ ನಿತ್ಯ ಈ ರೀತಿಯ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಇಂತಹ ಘಟನೆಗಳನ್ನು ತಡೆಯಲು ಗಸ್ತು ಹೆಚ್ಚಿಸಿ ಕಿಡಿಗೇಡಿಗಳನ್ನು ನಿಯಂತ್ರಿಸುವಂತೆ ಸೂಚನೆ ನೀಡಲಾಗಿದೆ. ಇದೇ ರೀತಿ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 11 ಜನರನ್ನು ವಶಕ್ಕೆ ಪಡೆದು 26 ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ಜಿಲ್ಲೆ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಐದು ವರ್ಷಕ್ಕಿಂತ ಹೆಚ್ಚು ಅವಧಿ ಒಂದೇ ಕಡೆ ಇದ್ದ ಸುಮಾರು 160 ಕ್ಕೂ ಹೆಚ್ಚು ಪೇದೆಗಳನ್ನು ಕಳೆದ ವರ್ಷ ವರ್ಗಾವಣೆ ಮಾಡಲಾಗಿತ್ತು. ಈ ಬಾರಿ ಸಹ ಹತ್ತು ವರ್ಷದಿಂದ ಒಂದೇ ವಿಭಾಗದಲ್ಲಿದ್ದ ಎಎಸ್‍ಐ, ಮುಖ್ಯಪೇದೆ ಹಾಗೂ ಪೇದೆಗಳು ಸೇರಿದಂತೆ 160 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಇದೇ ವೇಳೆ ಸಿಇಐಆರ್ ಪೋರ್ಟಲ್ ಸಹಾಯದಿಂದ ಕಳೆದು ಹೋಗಿದ್ದ 90 ಮೊಬೈಲ್‍ಗಳನ್ನು ಈ ಬಾರಿ ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು ಎಂದಿದ್ದಾರೆ.

ಜಿಲ್ಲೆಯಲ್ಲಿ ಪೋರ್ಟಲ್ ಆರಂಭಿಸಿದ ದಿನದಿಂದ ಈವರೆಗೆ ಸಾರ್ವಜನಿಕರು 1925 ಮೊಬೈಲ್‍ಗಳು ಕಳ್ಳತನ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಲ್ಲಿ ಇಲ್ಲಿವರೆಗೆ 238 ಮೊಬೈಲ್ ಪತ್ತೆ ಮಾಡಿ, 148 ಮುಬೈಲ್‍ನ್ನು ಈಗಾಗಲೇ ಹಸ್ತಾಂತರಿಸಲಾಗಿದೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಅಪರಿಚಿತ ವ್ಯಕ್ತಿಗಳಿಂದ ವಂಚನೆಗೆ ಒಳಗಾದರೆ ಕೂಡಲೇ 1930 ಸಹಾಯವಾಣಿಗೆ ಕರೆ ಮಾಡುವಂತೆ ಕೋರಿದರು.

ಚನ್ನರಾಯಪಟ್ಟಣ ಠಾಣಾ ವ್ಯಾಪ್ತಿಯ ರೌಡಿಶೀಟರ್ ಯಾಚೇನಹಳ್ಳಿ ಚೇತುಗೆ ಮತ್ತೊಂದು ವರ್ಷ ಸೆರೆವಾಸಕ್ಕೆ ಕೋರ್ಟ್ ಆದೇಶಿಸಿದೆ. 2007 ರಿಂದಲೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಈತನ ವಿರುದ್ಧ 3 ಕೊಲೆ, 7 ಕೊಲೆಯತ್ನ, 4 ಸುಲಿಗೆ ಹಾಗೂ 10 ಹಲ್ಲೆ ಪ್ರಕರಣಗಳಿವೆ. 2010 ರಲ್ಲೇ ರೌಡಿ ರಿಜಿಸ್ಟರ್ ತೆರೆದು ಆರೋಪಿ ಮೇಲೆ ನಿಗಾ ಇಡಲಾಗಿತ್ತು. ನಂತರ ಗಡಿಪಾರು ಆದೇಶ ಮಾಡಲಾಗಿತ್ತು. ನಂತರವೂ ಈತ ಅಪರಾಧ ಕೃತ್ಯ ಮುಂದುವರಿಸಿದ ಹಿನ್ನೆಲೆ ಗುಂಡಾ ಕಾಯ್ದೆ ಶಿಫಾರಸ್ಸು ಮಾಡಲಾಗಿತ್ತು. ಅದರಂತೆ ಜಿಲ್ಲಾಧಿಕಾರಿಗಳು ಮೇ.5 ರಂದು ಬಂಧನದ ಆದೇಶ ಹೊರಡಿಸಿದ್ದರು. ಬಳಿಕ ಚೇತುನನ್ನು ಕಲಬುರಗಿ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿತ್ತು. ನಂತರ ಜೂ.1 ರಂದು ಹೈಕೋರ್ಟ್ ಸಲಹಾಮಂಡಳಿ ಎದುರು ವಿವರಣೆ ಮಂಡಿಸಲಾಗಿತ್ತು. ಸಲಹಾ ಮಂಡಳಿ ಗೂಂಡಾಕಾಯ್ದೆಯನ್ನು ಅನುಮೋದಿಸಿ 1 ವರ್ಷ ಶಿಕ್ಷೆ ವಿಧಿಸಿ ಜೂ.7 ರಂದು ಸರ್ಕಾರದ ಪರ ಆದೇಶ ಮಾಡಿದೆ ಎಂದಿದ್ದಾರೆ.