ಯಲ್ಲಾಪುರ:ಮೋದಿಯವರು ದೇಶವನ್ನು ಗೆಲ್ಲಿಸುವ ರಾಜಕಾರಣ ಮಾಡುತ್ತಿದ್ದಾರೆ ಎಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ


ಯಲ್ಲಾಪುರ:
ಸ್ವಚ್ಛ ಭಾರತ, ಜನಧನ್ ಖಾತೆ, ಕಿಸಾನ್ ಸಮ್ಮಾನ್, ವಿಮೆ ಸೇರಿ ಅನೇಕ ಯೋಜನೆಗಳ ಮೂಲಕ ದೇಶದ ಪ್ರಗತಿಯ ದಿಕ್ಕನ್ನು ಬದಲಿಸಿದೆ. ಮೋದಿಯವರು ದೇಶವನ್ನು ಗೆಲ್ಲಿಸುವ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಅವರು ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ಜಿಲ್ಲೆಯ ಘಟ್ಟದ ಮೇಲಿನ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸ್ಕ್ಯಾಮ್ ಗಳ ಮೂಲಕ ಪ್ರಚಲಿತದಲ್ಲಿತ್ತು. ಮೋದಿ ಅಧಿಕಾರಕ್ಕೆ ಬಂದ ಮೇಲೆ ಸ್ಕೀಮ್ ಗಳ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.
ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಕಾಂಗ್ರೆಸ್ ಅನಗತ್ಯವಾಗಿ ಪಠ್ಯ ಪರಿಷ್ಕರಣೆಗೆ ಮುಂದಾಗಿದೆ. ತಮ್ಮ ಸಿದ್ಧಾಂತವನ್ನು ಹೇರಲು ಪಠ್ಯಪರಿಷ್ಕರಣೆ ಮಾಡಿ, ಶಿಕ್ಷಣ ವ್ಯವಸ್ಥೆ ಹಾಳುಗೆಡವುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಬಿಜೆಪಿ ಒಂದು ವಿರೋಧ ಪಕ್ಷವಾಗಿ, ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಜನಜಾಗೃತಿ ಮೂಡಿಸಿ, ಹೋರಾಟದ ಮೂಲಕ ಜನರಿಗೆ ನ್ಯಾಯ ದೊರಕಿಸಿಕೊಡಲಿದೆ ಎಂದರು.
ಶಾಸಕ ಶಿವರಾಮ ಹೆಬ್ಬಾರ್, ಎಂಎಲ್.ಸಿಗಳಾದ ಕೋಟ ಶ್ರೀನಿವಾಸ ಪೂಜಾರಿ, ಶಾಂತಾರಾಮ ಸಿದ್ದಿ, ಕೇಶವ ಪ್ರಸಾದ, ಮಾಜಿ ಸಚಿವ ಪ್ರಮೋದ ಮಧ್ವರಾಜ, ಮಾಜಿ ಶಾಸಕರಾದ ಸುನೀಲ ಹೆಗಡೆ, ರೂಪಾಲಿ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ಪ್ರಮುಖರಾದ ಪ್ರಮೋದ ಹೆಗಡೆ, ಸುನಂದಾ ದಾಸ್, ಪ್ರಸನ್ನ ಕೆರೆಕೈ, ಗಿರೀಶ ಪಟೇಲ, ಉಷಾ ಹೆಗಡೆ, ಗುರುಪ್ರಸಾದ ಹೆಗಡೆ ಇತರರಿದ್ದರು.