ಮಳೆ ಬಾರದೇ ರೈತಾಪಿವರ್ಗ ಸಂಕಷ್ಟದಲ್ಲಿದ್ದು,ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ರೈತ ಮುಖಂಡ ಪಿ.ಜಿ.ಭಟ್ಟ ಬರಗದ್ದೆ ಆಗ್ರಹಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂಗಾರು ಪೂರ್ವ ಮಳೆ ಇಲ್ಲ. ಮುಂಗಾರಿನ ಸುಳಿವೇ ಇಲ್ಲ. ಇದರಿಂದ ತಾಲೂಕಿನಲ್ಲಿ ಬಿತ್ತನೆ ಆರಂಭವಾಗಿಲ್ಲ. ಬಿಸಿಲ ಹೊಡೆತಕ್ಕೆ ಅಡಕೆ ತೋಟ ಒಣಗಿದೆ. ಎಲ್ಲೆಡೆ ಅಡಕೆ ಸಿಂಗಾರ ಒಣಗಿದೆ. ಬಿಸಿಲಿಗೆ ಅಡಕೆ ಮುಗುಡು ವ್ಯಾಪಕವಾಗಿ ಉದುರುತ್ತಿದೆ.
ಸರಾಸರಿ ಈ ಬಾರಿ ಶೇ.30 ರಷ್ಟು ಬೆಳೆ ನಷ್ಟ ವಾಗಲಿದೆ. ಅಡಕೆ ಬೆಳೆಗಾರರು, ಭತ್ತ ಬೆಳೆಗಾರರು ಸಂಕಷ್ಟ ದಲ್ಲಿದ್ದಾರೆ. ಈ ಕುರಿತು ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಸಂಯುಕ್ತ ಸರ್ವೆ ನಡೆಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಗೇರಾಳ ವಿಎಫ್ ಸಿ ಅಧ್ಯಕ್ಷ ಜಿ.ಎಸ್.ಭಟ್ಟ ಕಾರೆಮನೆ ಮಾತನಾಡಿ, ಹವಾಮಾನ ವೈಪರಿತ್ಯಗಳಿಂದಾಗಿ ರೈತಾಪಿವರ್ಗ ತೊಂದರೆಯಲ್ಲಿದೆ. ಸರಕಾರ ಮಧ್ಯಪ್ರವೇಶಿಸಿ ಬರಗಾಲ ಪೀಡಿತ ತಾಲೂಕೆಂದು ಘೋಷಿಸಿ,ರೈತರ ನೆರವಿಗೆ ಮುಂದಾಗಬೇಕೆಂದರು.