ಸಣ್ಣ ತಗಡಿನ ಶೆಡ್​, ಎರಡೇ ಎರಡು ಬಲ್ಬ್ ಇರುವ 90ರ ವೃದ್ಧೆ ಮನೆಗೆ ಲಕ್ಷಗಟ್ಟಲೇ ವಿದ್ಯುತ್ ಬಿಲ್: ಕಣ್ಣೀರಿಟ್ಟ ಅಜ್ಜಿ

ಕೊಪ್ಪಳ: ಕರ್ನಾಟಕ ಸರ್ಕಾರ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ  200 ಯುನಿಟ್​ ವಿದ್ಯುತ್ ಫ್ರೀ ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯದ ಹಲವೆಡೆ ಮನೆ ವಿದ್ಯುತ್ ಬಿಲ್​  ಲಕ್ಷ ಲಕ್ಷ ಬರುತ್ತಿರುವುದು ವರದಿಯಾಗುತ್ತಿವೆ. ಇತ್ತೀಚೆಗಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬರ ಮನೆಗೆ 7.71 ಸಾವಿರ ರೂ. ವಿದ್ಯುತ್ ಬಿಲ್​ ನೀಡಲಾಗಿತ್ತು. ಅಲ್ಲದೇ ಬೆಳಗಾವಿಯ ವಿಟಿಯು ವಿಶ್ವವಿದ್ಯಾಯಲಕ್ಕೆ ಹೆಸ್ಕಾಂ ಬರೋಬ್ಬರಿ 18 ಲಕ್ಷ ರೂ. ವಿದ್ಯುತ್ ಬಿಲ್ ನೀಡಿರುವುದು ಬೆಳಕಿಗೆ ಬಂದಿತ್ತು. ಇದೀಗ ಕೊಪ್ಪಳದ ವೃದ್ದೆಯ ಮನೆಗೆ ಲಕ್ಷ ಲಕ್ಷ ಬಿಲ್ ಬಂದಿದೆ. ಹೌದು.. ಎರಡೇ ಎರಡು ಲೈಟ್ ಹೊಂದಿರುವ ಕೊಪ್ಪಳದ 90 ವರ್ಷದ ಗೀರಿಜಮ್ಮ ಎನ್ನುವ  ವೃದ್ಧೆ ಮನೆಗೆ ಜೆಸ್ಕಾಂ, ಲಕ್ಷಗಟ್ಟಲೆ ವಿದ್ಯುತ್​ ಬಿಲ್ ನೀಡಿದೆ.

ಕೊಪ್ಪಳದ ಭಾಗ್ಯನಗರದಲ್ಲಿ ಸಣ್ಣ ತಗಡಿನ ಶೆಡ್​ನಲ್ಲಿ ವಾಸವಾಗಿರುವ 90 ವಯಸ್ಸಿನ ಗೀರಿಜಮ್ಮ ಮನೆಯಲ್ಲಿ ಎರಡು ಬಲ್ಬ್ ಇವೆ. ಆದರೂ 6 ತಿಂಗಳಲ್ಲಿ ಬರೋಬ್ಬರಿ 1 ಲಕ್ಷ ರೂ. ಬಿಲ್​ ಬಂದಿದೆ. ಈ ಅಜ್ಜಿ ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದರು. ಹೀಗಾಗಿ ಜೆಸ್ಕಾಂ, ಪ್ರತಿ 70 ರಿಂದ 80 ರೂ ಬೀಲ್ ನೀಡುತ್ತಿತ್ತು. ಆದ್ರೆ, ಆರು ತಿಂಗಳ ಹಿಂದೆ ವೃದ್ದೆಯ ಮನೆಗೆ ಜೆಸ್ಕಾಂ ಸಿಬ್ಬಂದಿ ಮೀಟರ್ ಅಳವಡಿಸಿದ್ದು, ಇದೀಗ 6 ತಿಂಗಳಲ್ಲಿ ಅಜ್ಜಿ ಮನೆಗೆ ಬರೋಬ್ಬರಿ 1,03,315 ರೂ. ವಿದ್ಯುತ್ ಬಿಲ್ ನೀಡಲಾಗಿದ್ದು, ಇದರಿಂದ ಅಜ್ಜಿ ಶಾಕ್ ಆಗಿದ್ದಾಳೆ.

ಒಂದೊತ್ತಿನ ಊಟಕ್ಕೆ ಪರದಾಡುವ 90 ರ್ಷದ ಅಜ್ಜಿ, ಇದೀಗ 1 ಲಕ್ಷ ರೂ. ವಿದ್ಯುತ್ ಬಿಲ್ ಹೇಗೆ ಕಟ್ಟುವುದು ಎಂದು ಕಣ್ಣೀರಿಟ್ಟಿದ್ದಾಳೆ. ಇನ್ನು ಒಂದು ತಗಡಿನ ಶೆಡ್ ಮನೆಯಲ್ಲಿ ಕೇವಲ ಎರಡು ಬಲ್ಬ್​ಗೆ ಲಕ್ಷಗಟ್ಟಲೇ ವಿದ್ಯುತ್​ ಬಿಲ್​ ಬರುತ್ತಾ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ. ಮೀಟರ್ ರೀಡರ್ ಎಡವಟ್ಟಿನಿಂದ ರೀತಿ ಆಗಿದ್ಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳು ಗಮನಹರಿಸಿ ಏಕೆ ಇಷ್ಟೊಂದು ಬಿಲ್ ಬಂದಿದೆ ಎಂದು ಪರಿಶೀಲಿಸಬೇಕಿದೆ.

ಒಟ್ಟಿನಲ್ಲಿ ವಿದ್ಯುತ್​ ಸರಬರಾಜು ಇಲಾಖೆಯ ಮೀಟರ್ ರೀಡರ್​ ಸಿಬ್ಬಂದಿ ಎಡವಟ್ಟುಗಳಿಂದ ರಾಜ್ಯದಲ್ಲಿ ವಿದ್ಯುತ್​ ಬಿಲ್​ ಹೆಚ್ಚಳದ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿವೆ. ಹೀಗಾಗಿ ಇಂಧನ ಇಲಾಖೆ ಈ ಬಗ್ಗೆ ಗಮನಹರಿಸಬೇಕಿದೆ.