ಬೆಂಗಳೂರು: ಕಾಂಗ್ರೆಸ್ ಸರ್ಕಾರದವರು ಕೊಟ್ಟ ಮಾತಿನಂತೆ ಅಕ್ಕಿ ಕೊಡದೇ ನಾಟಕ ಆಡ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಕ್ಕಿ ಗ್ಯಾರಂಟಿ ವಿಳಂಬ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳ ನಾಟಕವನ್ನು ಜನರು ನೋಡಲೇಬೇಕು. ಎರಡು ರಾಷ್ಟ್ರೀಯ ಪಕ್ಷಗಳಿಗೆ ಮತ ಕೊಟ್ಟಿದ್ದಾರೆ. ಇವರ ನಾಟಕ ನೋಡಲೇಬೇಕು. ಇದು ಈಗ ಅನಿವಾರ್ಯತೆ ಎಂದು ವ್ಯಂಗ್ಯವಾಡಿದರು.
ರಾಜ್ಯದ ಜನ ಕೊಟ್ಟಿರೋ ತೀರ್ಮಾನದಿಂದ ನಾಡಿನ ಜನರಿಗೆ ಹೇಗೆ ಟೋಪಿ ಹಾಕ್ತಾರೆ ಅನ್ನೋದನ್ನು ಜನರು ನೋಡಲೇಬೇಕು. ಇದನ್ನು ಜನರೇ ಸೃಷ್ಟಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ನಿನ್ನೆ ಪ್ರತಿಭಟನೆ ಮಾಡಿದೆ. ಕಾಂಗ್ರೆಸ್ ಅಧ್ಯಕ್ಷರು, ಸಚಿವರು ಅಕ್ಕಿಗಾಗಿ ಪ್ರತಿಭಟನೆ ಮಾಡಿ ಕೇಂದ್ರದ ಮೇಲೆ ದೂಷಣೆ ಮಾಡಿದ್ದಾರೆ. 10 ಕೆಜಿ ಅಕ್ಕಿ ಕೊಡ್ತೀವಿ ಅಂತ ಜನರ ಮುಂದೆ ಮಾತು ಕೊಟ್ಟಾಗ ಈ ಸಮಸ್ಯೆ ಬಗ್ಗೆ ಅರಿವು ಇರಲಿಲ್ಲವಾ ಈ ಸರ್ಕಾರಕ್ಕೆ ಎಂದು ಕಿಡಿಕಾರಿದರು.
ಎಫ್‌ಸಿಐಗೆ ಪತ್ರ ಬರೆದಿದ್ದೇನೆ ಎಂದು ಸಿಎಂ ಹೇಳ್ತಾರೆ. ರಾಜ್ಯದ ಸಿಎಂ ಹೀಗೆ ಉಡಾಫೆ ಮಾತಾಡೋದು ಎಷ್ಟು ಸರಿ? ಅಕ್ಕಿ ಬೇಕಿದ್ರೆ ಕೇಂದ್ರ ಸಚಿವರನ್ನು ಸಿಎಂ ಅಥವಾ ಸಚಿವರೋ ಭೇಟಿ ಆಗಬೇಕಿತ್ತು. ಯಾವನೋ ಎಫ್‌ಸಿಐ ಅಧಿಕಾರಿಗೆ ಪತ್ರ ಬರೆದು ಅಕ್ಕಿ ಕೊಡಿ ಅಂತ ಕೇಳಿದ್ರೆ ಅವನಿಗೇನು ಪವರ್ ಇದೆ? ಕೆಲವು ಗೈಡ್‌ಲೈನ್ಸ್ ಅವರು ಇಟ್ಟುಕೊಂಡಿದ್ದಾರೆ. ಈಗ ಕೇಂದ್ರ ಸರ್ಕಾರವೇ 5 ಕೆಜಿ ಅಕ್ಕಿ ಕೊಡ್ತಿದ್ದಾರೆ. ಇಲ್ಲಿ ಜನರಿಗೆ ಕೊಡ್ತಿರೋದೆ ಆ 5 ಕೆಜಿ. ಕಾಂಗ್ರೆಸ್ ನಾಯಕರು ಒಂದು ವಾರದಿಂದ ಪದೇ ಪದೇ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ. ರಾಜ್ಯವನ್ನು ದ್ವೇಷಿಸುತ್ತಿದ್ದಾರೆ ಎಂದು ಹೇಳಿಕೆ ಕೊಡುತ್ತಿದ್ದಾರೆ. ಕೇವಲ ಕೇಂದ್ರದ ಮೇಲೆ ದೂಷಣೆ ಮಾಡ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಜವಾಬ್ದಾರಿ ಯಾರು ಹೇಳ್ತಿಲ್ಲ ಅಂತ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರಕ್ಕೆ ಇಡೀ ದೇಶದಲ್ಲಿ ಅವರದ್ದೇ ಆದ ಕಮಿಟ್‌ಮೆಂಟ್ ಇರುತ್ತೆ. ಇವರಿಗೆ ಬೇಕಾದ ಹಾಗೆ ಅಕ್ಕಿ ಕೊಡಿ ಅಂದ್ರು ಅವ್ರು ಯಾಕೆ ಕೊಡ್ತಾರೆ? ನಾನು ಸಮ್ಮಿಶ್ರ ಸರ್ಕಾರದಲ್ಲಿ ರೈತರ ರಾಷ್ಟ್ರೀಯ ಬ್ಯಾಂಕ್‌ಗಳ ಸಾಲಮನ್ನಾ ಮಾಡಿದೆ. ಹಾಗಂತ ಪ್ರಧಾನಿ ಕೇಂದ್ರ ಸರ್ಕಾರ ಹಣ ಕೊಡಬೇಕು ಅಂತ ಕೇಳಿದ್ನಾ? ನಮ್ಮ ರಾಜ್ಯದ ಜನರ ತೆರಿಗೆ ಹಣದಿಂದ ನಾನು ಸಾಲಮನ್ನಾ ಮಾಡಿದೆ. ಇವತ್ತು ಅಕ್ಕಿ ಕೊಡೋದು ಕಾಂಗ್ರೆಸ್ ಪಕ್ಷಕ್ಕೆ ದರ್ದು ಇದೆ. ಕೇಂದ್ರಕ್ಕೆ ಯಾವ ದರ್ದು ಇದೆ ನೀವು ಕೇಳೊ ಅಕ್ಕಿ ಕೊಡೋಕೆ? ಜನತೆಗೆ ಮಾತು ಕೊಟ್ಟಿದ್ದು ನೀವು 10 ಕೆಜಿ ಕೊಡ್ತೀರಿ ಅಂತ. ಅದಕ್ಕೆ ಪರ್ಯಾಯ ವ್ಯವಸ್ಥೆ ಖರ್ಚು ನೀವು ರೆಡಿ ಮಾಡಿಕೊಳ್ಳಬೇಕು. ಈ ನಾಟಕ ಎಷ್ಟು ದಿವಸ ಆಡ್ತೀರಾ? ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಕನ್ನಡ ನಾಡಿನ ಜನತೆಗೆ ಹೇಳ್ತೀನಿ, ಜನ ತೀರ್ಮಾನ ತೆಗೆದುಕೊಳ್ಳುವಾಗ ನಿಮ್ಮ ಬದುಕು ಏನು ಅಂತ ನೋಡಿ ತೀರ್ಮಾನ ಮಾಡಿ. ನಿಮ್ಮ ಬದುಕು ಕಟ್ಟಿಕೊಳ್ಳಲು ಒಳ್ಳೆಯ ತೀರ್ಮಾನ ಮಾಡದೇ ಹೋದರೆ ಮುಂದೆ ಇನ್ನು ಕೆಟ್ಟ ದಿನಗಳನ್ನು ನೋಡಬೇಕಾಗುತ್ತದೆ. 5 ಕೆಜಿ ಆದ್ರೂ ಕೊಡಲಿ 10 ಕೆಜಿ ಆದ್ರೂ ಕೊಡಲಿ. ನಾನು ಬಿಜೆಪಿ ಅವರ ತರಹ 15 ಕೆಜಿ ಕೊಡಿ ಅಂತ ಡಿಮಾಂಡ್ ಮಾಡೊಲ್ಲ. 10 ಕೆಜಿನೇ ಕೊಡಿ. 5 ಕೆಜಿ ಅಕ್ಕಿ ಕೊಡೋ ಜವಾಬ್ದಾರಿ ರಾಜ್ಯ ಸರ್ಕಾರದ್ದು. ಕೇಂದ್ರ ಸರ್ಕಾರದ್ದು ಅಲ್ಲ. ಕೇಂದ್ರ ಸರ್ಕಾರದ ಮೇಲೆ ಯಾಕೆ ಪ್ರತಿಭಟನೆ ಮಾಡ್ತೀರಾ? ಪ್ರತಿಭಟನೆ ಮಾಡಲು ನಿಮಗೆ ನೈತಿಕತೆ ಇದೆಯಾ? ಕೇಂದ್ರ ಸರ್ಕಾರ ಯಾಕೆ ಅಕ್ಕಿ ನಿಮಗೆ ಕೊಡಬೇಕು? ಎಂದು ಪ್ರಶ್ನೆ ಮಾಡಿದರು.
ಕೇಂದ್ರದ ಬಳಿ ನೀವು ಈ ತೀರ್ಮಾನ ಮಾಡಿದ ಅರ್ಜಿ ಹಾಕಿಕೊಂಡಿದ್ರಾ? ಈ ಘೋಷಣೆ ಮಾಡಿದಾಗ ಕೇಂದ್ರ ಸರ್ಕಾರದ ಪರ್ಮಿಷನ್ ತೆಗೆದುಕೊಂಡಿದ್ರಾ? ಯಾವನೋ ಒಬ್ಬ ಬಂದ ಎಲೆಕ್ಷನ್ ತಂತ್ರಗಾರಿಕೆ ಮಾಡೋನು. ಅವನು ಹೇಳಿದ್ದನ್ನೆಲ್ಲ ನನಗೂ ಫ್ರೀ, ನಿನಗೂ ಫ್ರೀ.. ಸಿಎಂ ನನ್ ಹೆಂಡ್ತಿಗೂ ಫ್ರಿ, ಸಚಿವರ ಹೆಂಡ್ತಿಗೂ ಫ್ರೀ ಅಂದ್ರಿ. ನಿಮ್ಮ ಡಿಸಿಎಂ ಏನ್ ಹೇಳ್ತಾರೆ? ಎಲ್ಲರಿಗೂ ಫ್ರೀ ಅಂದ್ರು. ಈಗ ಏನ್ ಆಗ್ತಿದೆ? ಇದೇನು ಹುಡುಗಾಟಿಕೆನಾ? ಈ ರಾಜ್ಯವನ್ನು ಈ ರೀತಿ ಮಾಡಿಕೊಂಡು ಹೊರಟಿರೋದು. ನೋಡೋಣ ಇವರು ಏನೇನು ಮಾಡ್ತಾರೆ ಅಂತ ಕಾಯೋಣ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.