ಬೆಂಗಳೂರು: ಇದೇ ಜೂನ್ ತಿಂಗಳ 9ರಂದು ಬೆಳ್ಳಂದೂರು ಕೋಡಿಯಲ್ಲಿ ಮೃತದೇಹ ಸಿಕ್ಕಿತ್ತು. ಡೆಡ್ ಬಾಡಿ ಸಿಕ್ಕಿ 13 ದಿನ ಕಳೆದರೂ ಇದುವರೆಗೂ ಚಿಕ್ಕ ಸುಳಿವು ಸಿಕ್ಕಿಲ್ಲ . ಮೃತ ಪಟ್ಟ ವ್ಯಕ್ತಿಯಾರೆಂಬುವ ಗುರುತು ಸಹ ಪತ್ತೆಯಾಗಿಲ್ಲ. ದೊಡ್ಡ ದೊಡ್ಡ ಕೇಸ್ ಪತ್ತೆ ಮಾಡಿದ್ದ ಪೊಲೀಸರಿಗೆ ಮಾರತ್ ಹಳ್ಳಿ ಕೊಲೆ ಪ್ರಕರಣ ಸವಾಲಾಗಿದೆ . ಹಂತಕರನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಚಾಲೆಂಜಿಂಗ್ ಆಗಿದೆ. ಹಂತಕನ ಹೆಜ್ಜೆಯಷ್ಟೇ ಅಲ್ಲ, ಮೃತನ ಗುರುತು ಸಹ ಪತ್ತೆ ಆಗದಂತೆ ಹತ್ಯೆ ಮಾಡಲಾಗಿದ್ದು ಹಂತಕನ ಜಾಲ ಬೇಧಿಸುವಲ್ಲಿ ಪೊಲೀಸರು ಸೋಲುತ್ತಿದ್ದಾರೆ.
ಇದೇ ತಿಂಗಳ 9ರಂದು ಕತ್ತು ಬಿಗಿದು ಚೀಲದಲ್ಲಿ ತುಂಬಿದ ರೀತಿ ಅಂದಾಜು 28ರಿಂದ 35 ವರ್ಷದ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಪೊಲೀಸರು ತಲೆ ಕೆಡಿಸಿಕೊಂಡು ಹಂತಕನ ಪತ್ತೆಗೆ ಬಲೆ ಬೀಸಿದ್ದಾರೆ. ಆದ್ರೆ ತನಿಖೆಯಲ್ಲಿ ಹಂತಕರ ಬಗ್ಗೆ ಚಿಕ್ಕ ಸುಳಿವೂ ಸಹ ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಒಂದು ಟೀಮ್, ತಮಿಳುನಾಡಿನಲ್ಲಿ ಎರಡು ಟೀಮ್ಗಳು ಹಂತಕರಿಗಾಗಿ ಬೀದಿ, ಬೀದಿ ಹುಡುಕಾಡುತ್ತಿವೆ. ಮೃತದೇಹ ಸಿಕ್ಕು 13 ದಿನ ಕಳೆದರೂ ಯಾವುದೇ ಕ್ಲ್ಯೂ ಇಲ್ಲ. ಹಂತಕನಿರಲಿ, ಕೊಲೆಯಾದ ವ್ಯಕ್ತಿ ಯಾರೆಂಬುದೇ ಪತ್ತೆಯಾಗಿಲ್ಲ. ಈ ಕೇಸ್ ಖಾಕಿಗೆ ಚಾಲೆಂಜಿಂಗ್ ಆಗಿದೆ.
ಟೆಕ್ನಿಕಲ್ ಮಾಹಿತಿಗಳ ಬೆನ್ನು ಬಿದ್ದ ಪೊಲೀಸರು
ಕೊಲೆ ಮಾಡುವ ಹಂತಕ ಭಯ, ಆತಂಕದಲ್ಲಿ ಒಂದು ಸುಳಿವನ್ನಾದರೂ ಬಿಟ್ಟೆ ಬಿಟ್ಟಿರುತ್ತಾನೆ ಎಂಬ ಮಾತನ್ನು ಸಿನಿಮಾಗಳಲ್ಲಿ ಕೇಳಿರುತ್ತೀವಿ. ಆದ್ರೆ ಇಲ್ಲಿ ಪೊಲೀಸರು ಕಳೆದ 12 ದಿನದಿಂದ ಟೆಕ್ನಿಕಲ್ ಮಾಹಿತಿಗಳ ಬೆನ್ನು ಬಿದ್ದಿ ದ್ದಾರೆ. ಆದ್ರೆ ಯಾವುದೇ ರೀತಿಯಲ್ಲೂ ಹಂತಕರು ಮಾತ್ರ ಸಾಕ್ಷಿ ಬಿಟ್ಟು ಹೋಗಿಲ್ಲ. ಹೀಗಾಗಿ ಖಾಕಿ ಸಾಂಪ್ರದಾಯಿಕ ಪೊಲೀಸರಿಂಗ್ ಆರಂಭಿಸಿದ್ದಾರೆ. 5 ಸಾವಿರ ಪಾಂಪ್ಲೇಟ್ ಪ್ರಿಂಟ್ ಮಾಡಿಸಿ ಬೆಂಗಳೂರು-ತಮಿಳುನಾಡಿನ ಹಲವೆಡೆ ಹಂಚಿದ್ದಾರೆ.
ಟ್ಯಾಂಟು ಮೂಲಕ ಹಂತಕನ ಪತ್ತೆಗೆ ಜಾಲ
ಮತ್ತೊಂದೆಡೆ ಮೃತದೇಹದಲ್ಲಿ ಪತ್ತೆಯಾದ ಟ್ಯಾಟುವಿನಿಂದ ಕ್ಲ್ಯೂ ಹುಡುಕುವ ನಿಟ್ಟಿನಲ್ಲಿ ತಮಿಳುನಾಡಿನಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ. ಪತ್ತೆಯಾದ ಟ್ಯಾಟು ತಮಿಳಿನಲ್ಲಿದ್ದು ಅಲ್ಲಿನ ಟ್ಯಾಟು ಅಂಗಡಿಗಳಲ್ಲಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಕುಟುಂಬದಲ್ಲೇ ನಡೆದ ಗಲಾಟೆಗೆ ಕೊಲೆ ನಡೆದಿರೋ ಶಂಕೆ ವ್ಯಕ್ತವಾಗಿದ್ದು ಈವರೆಗೂ ಮೃತನ ಬಗ್ಗೆ ಯಾವುದೇ ಮಿಸ್ಸಿಂಗ್ ಕೇಸ್ ದಾಖಲಾಗಿಲ್ಲ. ಮೃತದೇಹ ಸಿಗುವ ನಾಲ್ಕು ದಿನದ ಮುಂಚೆ ಕೊಲೆ ಆಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಒಟ್ಟಾರೆ ವ್ಯಕ್ತಿ ನಾಪತ್ತೆಯಾಗಿ 16 ದಿನವಾದರೂ ಮೃತನ ಕಡೆಯವರು ಠಾಣೆಗೆ ಬಂದಿಲ್ಲ. ಸದ್ಯ ಮಾರತ್ ಹಳ್ಳಿ ಪೊಲೀಸರು ಈ ಕೇಸ್ನಲ್ಲಿ ಮುಳುಗಿದ್ದು ಹಂತಕರಿಗಾಗಿ ಗುಪ್ತ ಕಾರ್ಯಾಚರಣೆ ನಡೆಸುತ್ತಿದ್ದಾರೆ.