9 ದಿನಗಳಲ್ಲಿ ಬರೋಬ್ಬರಿ 4.24 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ, ಇದರ ಮೊತ್ತ ಎಷ್ಟು ಗೊತ್ತಾ?

ಬೆಂಗಳೂರು: ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್​ ಘೋಷಿಸಿದ್ದ ಐದು ಗ್ಯಾರೆಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಜೂ.11 ರಂದು ರಾಜ್ಯ ಸರ್ಕಾರ ಚಾಲನೆ ನೀಡಿತು. ಈ ಮೂಲಕ ಮಹಿಳೆಯರಿಗೆ ಸರ್ಕಾರಿ ಬಸ್​​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಯಿತು. ಅದರಂತೆ ಮಹಿಳೆಯರು ಸಾರಿಗೆ ಇಲಾಖೆಯ 4 ನಿಗಮದ ಸರ್ಕಾರಿ ಬಸ್​​ಗಳಲ್ಲಿಯೂ ಉಚಿತವಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ಪ್ರವಾಸಿ ಸ್ಥಳಗಳು, ದೇವಸ್ಥಾನಗಳು ಫುಲ್​ ಆಗಿವೆ. ಹೀಗೆ ಶಕ್ತಿ ಯೋಜನೆಯಡಿ ಕಳೆದ 9 ದಿನಗಳಿಂದ ಬರೊಬ್ಬರಿ 4.24 ಕೋಟಿಗೂ ಹೆಚ್ಚು ಮಹಿಳೆಯರು ಸೇವೆಯನ್ನು ಪಡೆದುಕೊಂಡಿದ್ದಾರೆ. ಪ್ರಯಾಣಿಸಿದ ಮಹಿಳಾ ಪ್ರಮಾಣಿಕರ ಟಿಕೆಟ್ ವೆಚ್ಚ 100 ಕೋಟಿ ರೂಪಾಯಿ ದಾಟಿದೆ.

ಜೂನ್ 11 ರಂದು ಪ್ರಾರಂಭವಾದ ಈ ಯೋಜನೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯೂಕೆಆರ್‌ಟಿಸಿ) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್​ಟಿಸಿ)ಗಳಲ್ಲಿ ನಿರ್ವಹಿಸುವ ಬಸ್‌ಗಳಲ್ಲಿ 4,24,60,089 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, 15,94,32,747 ಕೋಟಿ ರೂಪಾಯಿ ಮೌಲ್ಯದ ಟಿಕೆಟ್ ವಿತರಿಸಲಾಗಿದೆ.

9 ದಿನಗಳಲ್ಲಿ ನಾಲ್ಕು ನಿಗಮದಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ

ಇನ್ನು ನಾಲ್ಕು ವಿಭಾಗಗಳ ಪೈಕಿ, ಒಂಬತ್ತು ದಿನಗಳ ಅವಧಿಯಲ್ಲಿ ಬಿಎಮ್​ಟಿಸಿಯಲ್ಲಿ 1,44,06,090 ಕೋಟಿ ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. ಅದರ ನಂತರ ಕೆಎಸ್‌ಆರ್‌ಟಿಸಿ 1,23,07,847 ಹಾಗೂ ಎನ್‌ಡಬ್ಲ್ಯೂಕೆಆರ್‌ಟಿಸಿ 1,02,53,506 ಮತ್ತು ಕೆಕೆಆರ್‌ಟಿಸಿಯಲ್ಲಿ 54,92,646ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ನಾಲ್ಕು ನಿಗಮದಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಟಿಕೆಟ್​ ಮೌಲ್ಯ

ಕೆಎಸ್‌ಆರ್‌ಟಿಸಿ  38.25 ಕೋಟಿ ರೂ.,

ಬಿಎಂಟಿಸಿ 17.61 ಕೋಟಿ ರೂ.

ಎನ್‌ಡಬ್ಲ್ಯೂಕೆಆರ್‌ಟಿಸಿ 26.07 ಕೋಟಿ ರೂ.

ಕೆಕೆಆರ್‌ಟಿಸಿ 18.28 ಕೋಟಿ ರೂ.

ಒಂಬತ್ತು ದಿನಗಳ ಅವಧಿಯಲ್ಲಿ, ನಾಲ್ಕು ವಿಭಾಗಗಳ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ದೈನಂದಿನ ಸರಾಸರಿ 38.60 ಲಕ್ಷ ಇದ್ದು, ಹಣಕಾಸು ಇಲಾಖೆಯ ಪ್ರಕಾರ ಈ ಯೋಜನೆಯಿಂದ ಬೊಕ್ಕಸಕ್ಕೆ ಸುಮಾರು 4,000 ಕೋಟಿ ರೂ. ನಷ್ಟವಾಗಿದೆ. ಇನ್ನು ರಾಜ್ಯ ಸರ್ಕಾರವು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪುರುಷರಿಗೊಸ್ಕರ ಶೇಕಡಾ 50 ರಷ್ಟು ಸೀಟುಗಳನ್ನು ಮೀಸಲಿಟ್ಟಿದ್ದು, ಬಿಎಂಟಿಸಿ ಬಸ್‌ಗಳಲ್ಲಿನ ಎಲ್ಲಾ ರೀತಿಯ ಮೀಸಲಾತಿಗಳನ್ನು ತೆಗೆದುಹಾಕಿದೆ.