ಬೆಂಗಳೂರು (ಜೂ.21): ರಾಜ್ಯದ ಎಲ್ಲ ಮುಜರಾಯಿ ಇಲಾಖೆಗೊಳಪಡುವ ದೇವಸ್ಥಾನಗಳಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಯಾವುದೇ ಸರತಿ ಸಾಲಿನಲ್ಲಿ ನಿಲ್ಲಿಸದೇ ನೇರವಾಗಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಆಂಧ್ರಪ್ರದೇಶದಂತೆ ರಾಜ್ಯದಲ್ಲೂ ಹಿರಿಯ ನಾಗರೀಕರಿಗಾಗಿ ವಿಶೇಷ ಸವಲತ್ತು ನೀಡಲಾಗುವುದು. ರಾಜ್ಯದ ದೇವಸ್ಥಾನಗಳಲ್ಲಿ ಇನ್ಮುಂದೆ ಹಿರಿಯ ನಾಗರೀಕರು ಸಾಮಾನ್ಯ ಕ್ಯೂನಲ್ಲಿ ನಿಲ್ಲುವಂತಿಲ್ಲ. ದೇವಸ್ಥಾನಗಳಲ್ಲಿ ಇನ್ನುಮುಂದೆ ಹಿರಿಯ ನಾಗರಿಕರಿಗೆ ಡೈರೆಕ್ಟ್ ಎಂಟ್ರಿ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಹಿರಿಯ ನಾಗರೀಕರಿಗಾಗಿ ವಿಶೇಷ ಕ್ಯೂ ವ್ಯವಸ್ಥೆ ಮಾಡಲಾಗುತ್ತದೆ ಎಂಬ ಸುಳಿವನ್ನು ರಾಜ್ಯದ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.
ಆನ್‌ಲೈನ್ ಬುಕಿಂಗ್‌ನಲ್ಲೂ ರಿಯಾಯಿತಿ: ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವಸ್ಥಾನಗಳಲ್ಲಿ ವಯಸ್ಸಾದವರು ಸಾಮಾನ್ಯ ಕ್ಯೂನಲ್ಲಿ ನಿಂತು ಹೋಗಲು ಸಾಧ್ಯವಿಲ್ಲ. ಸಹಜವಾಗಿ ಕೆಲವರಿಗೆ 65 ವರ್ಷ ಆದ ನಂತ್ರ ತುಂಬಾ ಹೊತ್ತು ನಿಲ್ಲಲು ಸಾಧ್ಯವಾಗುವುದಿಲ್ಲ. ಅವರಿಗೆಲ್ಲಾ ಬೇರೆ ಕ್ಯೂ ಮಾಡಲು ತಿಳಿಸಿದ್ದೇನೆ. ಆನ್ಲೈನ್ ಬುಕ್ಕಿಂಗ್‌ನಲ್ಲೂ ವಿಶೇಷವಾಗಿ ಹಿರಿಯರಿಗೆ ವಸತಿಗಳನ್ನು ಕೊಡಲು ತಿಳಿಸಿದ್ದೇನೆ. ಎಲ್ಲ ದೇವಸ್ಥಾನಗಳು ಸ್ವಚ್ಚವಾಗಿರಬೇಕು. ದೇವಸ್ಥಾನಗಳಲ್ಲಿ ಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದರು.