ದೆಹಲಿಯ ಮುಸ್ತಫಾಬಾದ್‌ನಲ್ಲಿ ಮೂರಂತಸ್ತಿನ ಕಟ್ಟಡ ಕುಸಿತ: ಓರ್ವ ಸಾವು

ನವದೆಹಲಿ: ಈಶಾನ್ಯ ದೆಹಲಿಯ ಮುಸ್ತಫಾಬಾದ್‌ನಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬೆಳ್ಳಂಬೆಳಗ್ಗೆ ದುರಂತ ಸಂಭವಿಸಿದೆ. ಅವಘಡದಲ್ಲಿ ಓರ್ವ ಸಾವನ್ನಪ್ಪಿದ್ದು 3 ಜನ ಗಾಯಗೊಂಡಿದ್ದಾರೆ.

ಮುಂಜಾನೆ 5 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸುತ್ತಿವೆ. ಕಟ್ಟಡದ ಕೆಳಗೆ ಇನ್ನೂ ಕೆಲವರು ಸಿಲುಕಿರುವ ಶಂಕೆಯಿದ್ದು ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ದೆಹಲಿ ಅಗ್ನಿಶಾಮಕ ಇಲಾಖೆ ನಿರ್ದೇಶಕ ಅತುಲ್ ಗರ್ಗ್ ತಿಳಿಸಿದ್ದಾರೆ.

ಜುಲೈ 15 ರಂದು ದೆಹಲಿಯ ಅಲಿಪುರ್‌ದಲ್ಲಿ ನಿರ್ಮಾಣ ಹಂತದ ಗೋಡೌನ್‌ನ ಗೋಡೆ ಕುಸಿದ ಘಟನೆಯಲ್ಲಿ ಐವರು ಸಾವನ್ನಪ್ಪಿ, ಒಂಬತ್ತು ಮಂದಿ ಗಾಯಗೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ.