ಬಳ್ಳಾರಿ: ಮಾನಸಿಕ ನೆಮ್ಮದಿಗಾಗಿ ಧ್ಯಾನ, ಯೋಗ, ಪ್ರಾರ್ಥನೆ ಮಾಡಲು ಒಂದು ತಿಂಗಳು ರಜೆ ಬೇಕೆಂದ ಡಿವೈಎಸ್ಪಿ! ಕೇವಲ 5 ದಿನ ರಜೆ ಕೊಟ್ಟ ಎಸ್ಪಿ. ನಂತರ ಹಿರಿಯ ಅಧಿಕಾರಿಗಳಿಗೆ ದೂರಿನ ಪತ್ರ. ಇದು ನಡೆದಿರುವುದು ಬಳ್ಳಾರಿಯ ಸಂಡೂರಿನ ಪೊಲೀಸ್ ಅಧಿಕಾರಿಗಳ ಮಧ್ಯೆ. ಪೊಲೀಸ್ ಅಧಿಕಾರಿಗಳಿಬ್ಬರ ನಡುವಣ ರಜೆ ಸಮರ ಈಗ ಬಹಿರಂಗವಾಗಿದೆ. ರಜೆ ವಿಚಾರವಾಗಿ ಹಿರಿಯ ಅಧಿಕಾರಿಗಳ ವಿರುದ್ಧ ಸಂಡೂರು ಡಿವೈಎಸ್ಪಿ ಎಸ್ಎಸ್ ಕಾಶಿ ಡಿಜಿ, ಐಜಿಪಿ, ಎಡಿಜಿಪಿಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದಾರೆ. 1 ತಿಂಗಳು ರಜೆ ಕೇಳಿದರೆ ಕೇವಲ 5 ದಿನ ರಜೆ ನೀಡಲಾಗಿದೆ. ಮಾನಸಿಕ ನೆಮ್ಮದಿ ಇಲ್ಲದೆ ಕರ್ತವ್ಯದ ವೇಳೆ ಲೋಪವಾದರೆ ಇಲಾಖೆಯೇ ಹೊಣೆ ಎಂದು ಅವರು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿವೈಎಸ್ಪಿಯ ರಜೆ ವಿಚಾರದ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ಉಪವಿಭಾಗದ ಉಪ ಅಧೀಕ್ಷಕರಾಗಿರುವ ಡಿವೈಎಸ್ಪಿ ಆಗಿರುವ ಎಸ್ ಎಸ್ ಕಾಶಿ, ವ್ಯಯಕ್ತಿಕ ಕಾರಣಕ್ಕಾಗಿ ಒಂದು ತಿಂಗಳು ಕಾಲ ರಜೆ ಕೋರಿ ಮೇ 25 ರಂದು ಪತ್ರ ಬರೆದಿದ್ದರು. ಕಾಶಿ ಅವರು ವೈಯಕ್ತಿಕ ಕಾರಣಕ್ಕೆ ಒಂದು ತಿಂಗಳು ರಜೆಗಾಗಿ ಮನವಿ ಮಾಡಿದ್ದರು. ಮಾನಸಿಕ ನೆಮ್ಮದಿಗಾಗಿ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುವುದಕ್ಕಾಗಿ ವೈಯಕ್ತಿಕ ರಜೆ ನೀಡಬೇಕೆಂದು ಅವರು ಕೋರಿದ್ದರು. ಆದರೆ, ಅವರಿಗೆ ಕೇವಲ 5 ದಿನಗಳ ಕಾಲ ರಜೆ ಮಂಜೂರು ಮಾಡಲಾಗಿತ್ತು.
ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತಕುಮಾರ್ ಬಂಡಾರ್ ಅವರಿಗೆ ರಜೆ ಕೋರಿ ಪತ್ರ ಬರೆದಿದ್ದ ಡಿವೈಎಸ್ ಪಿ ಎಸ್ ಎಸ್ ಕಾಶಿಗೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು ಕೇವಲ 5 ದಿನಗಳ ಪರಿವರ್ತಿತ ರಜೆ ಮಂಜೂರು ಮಾಡಿದ್ರು. ಆದ್ರೆ ಒಂದು ತಿಂಗಳ ರಜೆ ಕೋರಿದ್ದನ್ನ ಪರಿಗಣಿಸದೇ ಕೇವಲ5 ದಿನ ರಜೆ ನೀಡಿದಕ್ಕೆ ಡಿವೈಎಸ್ ಪಿ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಶಿ, ರಜೆ ನೀಡದೆ ತಾರತಮ್ಯ ಮಾಡಲಾಗಿದೆ. ತಮಗೆ ಕಿರುಕುಳ ನೀಡಲಾಗುತ್ತಿದೆ. ಈ ಮೂಲಕ ಮಾನಸಿಕ ನೆಮ್ಮದಿ ಕದಡಿದ್ದಾರೆ ಎಂದು ಬಳ್ಳಾರಿ ಎಸ್ಪಿ ರಂಜಿತ್ ಕುಮಾರ್ ವಿರುದ್ಧ ಪತ್ರ ಬರೆದಿದ್ದಾರೆ.
ಮುಂದುವರಿದು, ರಜೆ ನೀಡದೆ ಮಾನಸಿಕ ಖಿನ್ನತೆಗೆ ಒಳಗಾದರೆ ಇಲಾಖೆಯೇ ಹೊಣೆಯಾಗಬೇಕಾಗುತ್ತದೆ. ಒತ್ತಡದಲ್ಲಿ ಸಿಬ್ಬಂದಿ, ಸಾರ್ವಜನಿಕರ ಜತೆ ವರ್ತನೆಯಲ್ಲಿ ಏನಾದರೂ ಅಚಾತುರ್ಯ ನಡೆದರೆ ಇಲಾಖೆಯೇ ಹೊಣೆಯೆಂದು ಅವರು ಪತ್ರದಲ್ಲಿ ಕಿಡಿ ಕಾರಿದ್ದಾರೆ.
ಈ ಹಿಂದೆ ಇಲಾಖೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಮೂಲಕ ಕಾಶಿ ಸುದ್ದಿಯಾಗಿದ್ದರು. ಐಜಿಪಿ ವಿರುದ್ಧ ಸಮರ ಸಾರಿ ರಾಜೀನಾಮೆಯನ್ನೂ ನೀಡಿದ್ದರು. ಇಲಾಖೆಯಲ್ಲಿ ಭ್ರಷ್ಟಾಚಾರ ಖಂಡಿಸಿ ರಾಜೀನಾಮೆ ನೀಡಿದ್ದರು. ಬಳ್ಳಾರಿ ಐಜಿಪಿಯೊಬ್ಬರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ನನಗೆ ಭ್ರಷ್ಟಾಚಾರ ತಡೆಯಲು ಆಗುತ್ತಿಲ್ಲವೆಂದು ಐಜಿಪಿಯೊಂದಿಗೆ ಸಭೆಯಲ್ಲಿ ಮಾತಿನ ಚಕಮಕಿ ನಡೆದು ರಾಜೀನಾಮೆ ಸಲ್ಲಿಸಿದ್ದರು. ಇಲಾಖೆಯ ಹಿರಿಯ ಅಧಿಕಾರಿಗಳ ಸಂಧಾನದ ನಂತರ ಅವರು ಕಾಶಿ ರಾಜೀನಾಮೆ ಹಿಂಪಡೆದು ಕರ್ತವ್ಯಕ್ಕೆ ಹಾಜರಾಗಿದ್ದರು.