ದಾವಣಗೆರೆ: ನಾಲ್ಕು ತಿಂಗಳ ಹಿಂದೆ ಮಹಿಳೆಯೊಬ್ಬರು ಕಾಣೆಯಾಗಿ, ಕೊಲೆ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೌದು ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ನಿಟ್ಟೂರು ಗ್ರಾಮದ ಕವಿತಾ(35) ಎಂಬುವವರನ್ನು ಕೊಲೆ ಮಾಡಿ, ಆಕೆಯ ಶವವನ್ನ ಸುಟ್ಟುಹಾಕಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಹಲವಾಗಲು ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದರು. ಇದೀಗ 4 ತಿಂಗಳ ಬಳಿ ಕೊಲೆ ಆರೋಪದ ಮೇಲೆ ಇದೇ ತಾಲೂಕಿನ ಕುಂಚೂರು ಗ್ರಾಮದ ಸಲೀಂ ಮುನ್ನಾಖಾನ್ ಎಂಬಾತನನ್ನ ಬಂಧಿಸಿದ್ದಾರೆ.
ಘಟನೆ ವಿವರ
ದಾವಣಗೆರೆ ಜಿಲ್ಲೆಯ ಅಲೂರಿನ ತವರು ಮನೆಯಲ್ಲಿದ್ದ ಮೃತ ಕವಿತಾ 2023 ರ ಫೆಬ್ರುವರಿ 23ರಂದು ಹರಿಹರಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಹೋದವರು ಮನೆಗೆ ವಾಪಾಸು ಬಂದಿರಲಿಲ್ಲ. ಗಂಡನ ಊರಾದ ನಿಟ್ಟೂರು ಸೇರಿದಂತೆ ಎಲ್ಲ ಕಡೆ ಹುಡುಕಾಡಿದರು ಪತ್ತೆಯಾಗದ ಕಾರಣ, ಕಾಣೆಯಾದ ಮಗಳನ್ನು ಪತ್ತೆ ಮಾಡಿಕೊಡುವಂತೆ ಪೊಲೀಸರಿಗೆ ಮೃತಳ ತಂದೆ ಭೀಮಪ್ಪ ಅವರು ಮಾರ್ಚ್ 7 ರಂದು ಹಲುವಾಗಲು ಠಾಣೆಗೆ ದೂರು ಸಲ್ಲಿಸಿದ್ದರು. ಈ ಕುರಿತು ಪ್ರಕರಣದ ತನಿಖೆ ನಡೆಸಿದ್ದ ಹಲವಾಗಲು ಪೊಲೀಸರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ತನಿಖೆ ವೇಳೆ ಸತ್ಯಾಂಶ ಬೆಳಕಿಗೆ
ಇನ್ನು ಮೃತಳೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಆರೋಪಿ ಸಲೀಂ ಫೆ.23ರಂದು ತೆಲಿಗಿ ಗ್ರಾಮಕ್ಕೆ ಬಂದಿದ್ದ ಕವಿತಾಳನ್ನು ತನ್ನ ಬೈಕ್ ಮೇಲೆ ಕೂರಿಸಿಕೊಂಡು ಕುಂಚೂರಿನ ಕೆರೆಯಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾತಿಗಿಳಿದಿದ್ದಾರೆ. ಈ ವೇಳೆ ಫೋನ್ ನಲ್ಲಿ ಮಾತನಾಡುವ ವಿಚಾರಕ್ಕೆ ಇಬ್ಬರ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದ್ದು, ಕೋಪಗೊಂಡ ಸಲೀಂ ಕವಿತಾಳ ಕತ್ತು ಹಿಸುಕಿ ಸಾಯಿಸಿದ್ದ. ಈ ವಿಷಯ ಯಾರಿಗೂ ಗೊತ್ತಾಗದಂತೆ ತಡೆಯಲು ಕೆರೆಯಂಗಳದಲ್ಲಿಯೇ ಆಕೆಯ ಶವ ಕಟ್ಟಿಗೆಯಲ್ಲಿ ಸುಟ್ಟು ಹಾಕಿ ಮನೆಗೆ ಹಿಂತಿರುಗಿದ್ದಾನೆ. ಅಲ್ಲಿ ನಡೆದಿರುವ ಘಟನೆಯನ್ನು ಆರೋಪಿ ಈಚೆಗೆ ತನ್ನ ಸ್ನೇಹಿತನ ಬಳಿ ಹೇಳಿಕೊಂಡಿದ್ದರಿಂದ ಪ್ರಕರಣ ಪತ್ತೆಗೆ ಸಹಕಾರಿ ಆಯಿತು ಎಂದು ಪೊಲೀಸರು ತಿಳಿಸಿದ್ದಾರೆ.