ಶಾಲೆಯೆಂದರೆ ತಿರಸ್ಕಾರ, ಟೀಚರ್​ಗಳೆಂದರೆ ಭಯ; ಓದನ್ನೇ ಬಿಡಲು ಕಾರಣಬಿಚ್ಚಿಟ್ಟ ಝೀರೋಧ

ಶಾಲಾ ಕಾಲೇಜಿನಲ್ಲಿ ನಾವು ಪಡೆಯುವ ಸರ್ಟಿಫಿಕೇಟ್ ಎಲ್ಲದಕ್ಕೂ ಮಾನದಂಡವಲ್ಲ. ಓದೇ ನಮ್ಮ ಜೀವನದ ಸರ್ವಸ್ವ ಅಲ್ಲ. ಕಾಲೇಜು ಮೆಟ್ಟಿಲೇ ಹತ್ತದ ಹಲವರು ದೊಡ್ಡದೊಡ್ಡ ವಿಜ್ಞಾನಿಗಳಾಗಿರುವ ನಿದರ್ಶನಗಳು ನಮ್ಮಲ್ಲುಂಟು. ಓದೇ ಬರದವರು ದೊಡ್ಡ ವಾಣಿಜ್ಯೋದ್ಯಮಿಗಳಾಗಿರುವುದು, ರಾಜಕಾರಣಿಗಳು, ಮಂತ್ರಿಗಳಾಗಿರುವುದನ್ನುನೊಡಿದ್ದೆವೆ. ಸಣ್ಣ ವಯಸ್ಸಿಗೆ ಕೋಟ್ಯಾಧಿಪತಿಯಾಗಿರುವ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವ್ಯಾವಹಾರಿಕ ಗುಟ್ಟು ಹಂಚಿಕೊಳ್ಳುವ ಝೀರೋಧದ ಸಹ–ಸಂಸ್ಥಾಪಕ ನಿಖಿಲ್‌ ಕಾಮತ್ ಹಾಗು ಅವರ ಸಹೋದರ ಸಿಇಒ ನಿತಿನ್ ಕಾಮತ್ ಇಬ್ಬರೂ ಕೂಡ ಇದಕ್ಕೆ ಉದಾಹರಣೆ ಎನಿಸಿದ್ದಾರೆ. ಬೇರೆ ಬೇರೆ ಉದ್ಯಮಸ್ನೇಹಿತರೊಂದಿಗೆ ಪೋಡ್​ಕ್ಯಾಸ್ಟ್ ನಡೆಸುವ ನಿಖಿಲ್ ಕಾಮತ್, ಅಂತಹದ್ದೊಂದು ಪೋಡ್​ಕ್ಯಾಸ್ಟ್​ನಲ್ಲಿ ಮಾತನಾಡುತ್ತಾ, ತಮ್ಮ ಕೆಟ್ಟ ಶಾಲಾ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ನಿಖಿಲ್ ಕಾಮತ್ ಶಾಲಾ ಓದನ್ನು ಮಧ್ಯಕ್ಕೇ ಬಿಟ್ಟು ವ್ಯವಹಾರಕ್ಕಿಳಿದು ಷೇರುಪೇಟೆಯಲ್ಲಿ ಒಳ್ಳೆಯ ಎತ್ತರಕ್ಕೆ ಬೆಳೆದಿರುವ ಸಂಗತಿ ಬಹಳ ಮಂದಿಗೆ ಗೊತ್ತಿರಬಹುದು. ಆದರೆ, ಶಾಲಾ ಓದನ್ನು ಯಾಕೆ ಬಿಟ್ಟೆ ಎಂಬ ಸತ್ಯವನ್ನು ಕಾಮತ್ ಬಹಿರಂಗಗೊಳಿಸಿದ್ದಾರೆ. ಶಿವಮೊಗ್ಗ ಮೂಲದ ನಿಖಿಲ್ ಕಾಮತ್ ಅವರಿಗೆ ಶಾಲೆ ಎಂದರೆ ಹೇಸಿಗೆ ಎನಿಸುತ್ತಿತ್ತಂತೆ. ಈ ಟೀಚರ್, ಆ ಟೀಚರ್ ಅಂತಲ್ಲ ಎಲ್ಲಾ ಟೀಚರ್​ಗಳನ್ನು ಕಂಡರೂ ಭಯವಾಗುತ್ತಿತ್ತಂತೆ.

ಶಾಲೆಗೆ ಹೋಗಲು ಬಹಳ ಜಿಗುಪ್ಸೆ ಎನಿಸುತ್ತಿತ್ತು. ಶಾಲೆ ಕಲಿಸುತ್ತಿದ್ದುದು ಬರೀ ಹೆದರಿಕೆ ಮತ್ತು ವಿಧೇಯತೆ ಮಾತ್ರವೇ. ವಿಧೇಯತೆಯ ವ್ಯಕ್ತಿ 10 ವರ್ಷದಲ್ಲಿ ಯಶಸ್ಸು ಕಾಣಲಾರ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ.

‘ನಾನು ಹೋಗುತ್ತಿದ್ದ ಶಾಲೆ ಭಯಂಕರವಾದುದು. ಶಾಲೆ ಎಂದರೆ ತಿರಸ್ಕಾರ, ನನ್ನ ಶಿಕ್ಷಕರನನ್ನು ದ್ವೇಷಿಸುತ್ತಿದ್ದೆ. ನಾವು ಯಾವುದಕ್ಕೆ ಹೆದರಬಾರದೋ ಅದಕ್ಕೆಲ್ಲಾ ಹೆದರುತ್ತಾ ಬೆಳೆದೆ. ನನ್ನ ಕ್ಲಾಸ್ ಟೀಚರ್, ಈ ಟೀಚರ್, ಆ ಟೀಚರ್ ಹೀಗೆ ಎಲ್ಲರಿಗೂ ಹೆದರುತ್ತಿದ್ದೆ. 10ನೇ ತರಗತಿಗಿಂತ ಹೆಚ್ಚು ನಾನು ಹೋಗಲಿಲ್ಲ. ಶಾಲೆಗೆ ಹೋಗದೇ ಕೆಲಸ ಅದೂ ಇದೂ ಮಾಡುತ್ತಾ ಇದ್ದೆ’ ಎಂದು ನಿಖಿಲ್ ಕಾಮತ್ ಈ ಪೋಡ್​ಕ್ಯಾಸ್ಟ್ ಚರ್ಚೆಯಲ್ಲಿ ನೆನಪಿಸಿಕೊಂಡಿದ್ದಾರೆ.