ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಆರಂಭದಲ್ಲೇ ವಿಘ್ನ: ಕೆಲಸಕ್ಕೆ ಬಾರದ ಸಿಬ್ಬಂದಿ, ಕೆಲಸ ಮಾಡದ ಸರ್ವರ್

ಬೆಂಗಳೂರು (ಜೂ.18): ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಜ್ಯೋತಿ ಯೋಜನೆಗೆ (ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌) ರಾಜ್ಯಾದ್ಯಂತ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆದರೆ, ಕೆಲವೆಡೆ ಅರ್ಜಿ ಸಲ್ಲಿಕೆಗೆ ಸರ್ವರ್‌ ಸಮಸ್ಯೆ ಆಗುತ್ತಿದೆ. ಮತ್ತೊಂದೆಡೆ ಭಾನುವಾರವೂ ಕೂಡ ಕೆಲಸ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದರೂ ಸಿಬ್ಬಂದಿ ಮಾತ್ರ ಕಚೇರಿಗೆ ಹಾಜರಾಗದೇ ಸಾರ್ವಜನಿಕರು ಬಂದು ವಾಪಸ್‌ ಹೋಗುತ್ತಿದ್ದಾರೆ.

ಇಂದಿನಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರದಿಂದ ಅವಕಾಶ ನೀಡಲಾಗಿದೆ. ಇಂದು ರಾಜ್ಯದ ಎಲ್ಲ ಎಸ್ಕಾಂ, ಬೆಂಗಳೂರು ಓನ್, ನಾಡಕಚೇರಿಗಳಲ್ಲಿ ಅರ್ಜಿ ನಮೂದಿಸುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಶನಿವಾರವೇ ಸೂಚನೆಯನ್ನು ನೀಡಿ ಆದೇಶ ಹೊರಡಿಸಿದೆ. ಆದರೆ, ನಾಡಕಚೇರಿ ಸಿಬ್ಬಂದಿ ಸರ್ಕಾರದ ಆದೇಶವನ್ನೇ ಗಾಳಿಗೆ ತೂರಿ ರಜೆಯ ಮೂಡ್‌ನಲ್ಲಿ ಕೆಲಸಕ್ಕೆ ಬಾರದೇ ಮನೆಯಲ್ಲಿದ್ದಾರೆ. ಸರ್ಕಾರ ಆದೇಶಕ್ಕೂ ನೌಕರರ ಕವಡೆ‌ಕಾಸಿನ ಬೆಲೆ ಕೊಡುತ್ತಿಲ್ಲ. ಜಿಲ್ಲಾಧಿಕಾರಿಗಳ ಆದೇಶವಿದ್ದರೂ ನಾಡಕಚೇರಿ ನೌಕರರು ಕೆಲಸಕ್ಕೆ ಹಾಜರಾಗಿಲ್ಲ. 

ರಾಜ್ಯಾದ್ಯಂತ ಎಲ್ಲ ನಾಡ ಕಚೇರಿಗಳಲ್ಲಿಯೂ ಜೂನ್ 18ರ ಭಾನುವಾರವನ್ನು ಕರ್ತವ್ಯ ದಿನವೆಂದು ಪರಿಗಣಿಸಿ ಕಾರ್ಯನಿರ್ವಹಿಸಲು ಸರ್ಕಾರದಿಂದ ಸೂಚಿಸಲಾಗಿತ್ತು. ಈ ಸಂಬಂದ ಶನಿವಾರವೇ ನಾಡಕಚೇರಿಗಳಿಗೆ ಸಿಬ್ಬಂದಿಗೆ ಆಯಾ ಜಿಲ್ಲಾಡಳಿತ ಅಧಿಕಾರಿಗಳು ಸುತ್ತೋಲೆಯನ್ನು ಹೊರಡಿಸಿದ್ದರು. ಆದರೆ, ಜಿಲ್ಲಾಧಿಕಾರಿಗಳ ಸೂಚನೆ ಇದ್ದರೂ ನಾಡಕಚೇರಿಗೆ ಸಿಬ್ಬಂದಿ ಮಾತ್ರ ಆಗಮಿಸಿಲ್ಲ. ಬೆಂಗಳೂರಿನ ಮಲ್ಲೇಶ್ವರಂ ನಾಡಕಚೇರಿಗೆ ಸಿಬ್ಬಂದಿಯೇ ಆಗಮಿಸಿರಲಿಲ್ಲ.  ಆದ್ದರಿಂದ ಸಾರ್ವಜನಿಕರು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆಗಾಗಿ ದಾಖಲೆಗಳನ್ನು ಹಿಡಿದುಕೊಂಡು ನಾಡಕಚೇರಿಗೆ ಬಂದು ವಾಪಸ್‌ ಹೋಗುತ್ತಿದ್ದಾರೆ. ಮತ್ತೆ ಕೆಲವರು ನಾಡ ಕಚೇರಿ ಬಳಿಯೇ ಕಾಯುತ್ತಾ ಕುಳಿತಿದ್ದಾರೆ.