ಕಲಬುರಗಿ(ಜೂ.18): ಇಲ್ಲಿನ ಜೇವರ್ಗಿ ಭೀಮಾ ತೀರದಲ್ಲಿನ ಮರಳು ಮಾಫಿಯಾಗೆ ಹೆಡ್ ಕಾನ್‌ಸ್ಟೇಬಲ್ ಬಲಿ ಪ್ರಕರಣದ ನಂತರ ಕಲಬುರಗಿ ಪೊಲೀಸರು ಮರಳು ದಂಧೆಕೋರರ ಮೇಲೆ ಮುಗಿಬಿದ್ದಿದ್ದಾರೆ. ಪ್ರಮುಖ ಆರೋಪಿ ಸೈಬಣ್ಣನನ್ನು ಬಂಧಿಸಿರುವ ಪೊಲೀಸರು ಈತ ದಾರಿಯಲ್ಲಿ ಯಡ್ರಾಮಿ ಪಿಎಸ್‌ಐ ಬಸವರಾಜ ಚಿತಕೋಟಿ ಮೇಲೆಯೇ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಮುಂದಾದಾಗ ಜೇವರ್ಗಿ ಪಿಎಸ್‌ಐ ಸಂಗಮೇಶ ಆರೋಪಿ ಕಾಲಿಗೆ ಗುಂಡು ಹೊಡೆದು ಮತ್ತೆ ವಶಕ್ಕೆ ಪಡೆದಿದ್ದಾರೆ.
ಚಾಕುವಿನಿಂದ ಯಡ್ರಾಮಿ ಪಿಎಸ್‌ಐ ಚಿತಕೋಟೆ ಮೇಲೆಯೇ ಹಲ್ಲೆಗೆ ಮುಂದಾಗಿದ್ದ ಆರೋಪಿ ಸೈಬಣ್ಣ ಅಲ್ಲಿಂದ ಪರಾರಿಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗೆ ಎಚ್ಚರಿಕೆ ನೀಡಿದರೂ ಅದರಿಂದ ಆರೋಪಿ ಸೈಬಣ್ಣ ಎಚ್ಚೆತ್ತುಕೊಳ್ಳದೆ ಹೋದಾಗ ಕಾಲಿಗೆ ಗುಂಡೇಟು ಹೊಡೆಯಲಾಗಿದೆ.
ಜೇವರ್ಗಿಯ ನೆಲೋಗಿ ಠಾಣೆ ವ್ಯಾಪ್ತಿಯಲ್ಲಿ ನಾರಾಯಣಪುರ- ಹುಲ್ಲೂರ್ ಹತ್ತಿರ ಗುರುವಾರ ರಾತ್ರಿ ಸಂಭವಿಸಿದಂತಹ ಪೇದೆ ಮಯೂರ್ ಚವ್ಹಾಣ್ ಹತ್ಯೆ ಪ್ರರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಅದಾಗಲೇ ಟ್ರ್ಯಾಕ್ಟರ್ ಚಾಲಕ ಸಿದ್ದಪ್ಪ ಕರ್ಜಗಿ ಈತನನ್ನು ಬಂಧಿಸಿ ವಶಕ್ಕೆ ಪಡೆದಿದ್ದರು. ಇದೇ ಪ್ರಕರಣದ ಪ್ರಮುಖ ಪ್ರಕರಣದ ಇನ್ನೋರ್ವ ಆರೋಪಿ ಸೈಬಣ್ಣ ಕರಜಗಿ ಬಂಧನಕ್ಕೆ ನಿನ್ನೆಯಿಂದಲೇ ಜಾಲ ಬೀಸಿದ್ದರು.
ಈತನನ್ನು ವಶಕ್ಕೆ ಪಡೆದು ಠಾಣೆಗೆ ವಿಚಾರಣೆಗೆಂದು ಕರೆ ತರುವಾಗ ದಾರಿಯಲ್ಲಿ ಜೇರಟಗಿ- ಮಂದೇವಾಲ ನಡುವೆ ಬಹಿರ್ದೆಸೆ ನೆಪದಲ್ಲಿ ಆರೋಪಿ ಸೈಬಣ್ಣ ಕೆಳಗಿಳಿದು ಅಲ್ಲೇ ಇದ್ದ ನೆಲೋಗಿ ಪಿಎಸ್‌ಐ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಮುಂದಾಗುತ್ತಿದ್ದಂತೆಯೇ ನೆಲೋಗಿ ಪಿಎಸ್‌ಐ ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿ ಆರೋಪಿ ಸೈಬಣ್ಣ ಕಾಲಿಗೆ ಆಳ ಗಾಯ ಮಾಡಿ ಮತ್ತೆ ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಗುಂಡೇಟು ತಗುಲಿರುವ ಆರೋಪಿ ಸೈಬಣ್ಣ ಕರ್ಜಗಿ ಈತ ಈಗಾಗಲೇ ಪೊಲೀಸ್ ವಶದಲ್ಲಿರುವ ಚಾಲಕ ಸಿದ್ದಪ್ಪ ಕರ್ಜಗಿ ಸಹೋದರ. ಗಾಯಗೊಂಡಿರುವ ಸೈಬಣ್ಣಗೆ ಚಿಕಿತ್ಸೆಗಾಗಿ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.