ಬೆಂಗಳೂರು: ಕಮಿಷನ್‌ಗಾಗಿ ಹೊರ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡುತ್ತಾರೆ ಎಂದು ಶಾಸಕ ವಿಜಯೇಂದ್ರ ಮಾಡಿದ ಆರೋಪಕ್ಕೆ ಶನಿವಾರ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ. ಇಲ್ಲಿ ಬೇಕೆಂದರೆ ಅವರೇ ಅಕ್ಕಿ ಕೊಡಿಸಲಿ. ವಿಜಯೇಂದ್ರ ಮಿಲ್‌ನಲ್ಲಿ ಇದೆಯಾ ಅಷ್ಟು ಅಕ್ಕಿ? ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಹೊರ ರಾಜ್ಯಗಳಿಂದ ಅಕ್ಕಿ ಖರೀದಿ ವಿಚಾರವಾಗಿ ಮಾತನಾಡಿದ ಸಿಎಂ, ತೆಲಂಗಾಣದ ಸಿಎಂ ಅವರೊಂದಿಗೆ ನಾನೇ ಖುದ್ದಾಗಿ ಮಾತನಾಡಿದ್ದೇನೆ. ಅಲ್ಲಿ ಅಕ್ಕಿ ಸಿಗುತ್ತಿಲ್ಲವಂತೆ. ನಮ್ಮ ಸಿಎಸ್ ಅವರಿಗೂ ಈ ಬಗ್ಗೆ ಮಾತನಾಡಲು ಹೇಳಿದ್ದೇನೆ. ಛತ್ತೀಸ್‌ಗಢ ರಾಜ್ಯದವರು 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಆಂಧ್ರ ಪ್ರದೇಶದವರೊಂದಿಗೆ ನಮ್ಮ ಸಿಎಸ್ ಅವರನ್ನು ಮಾತನಾಡಲು ಹೇಳಿದ್ದೇನೆ. ಛತ್ತೀಸ್‌ಗಢದ ಅಕ್ಕಿಗೆ ಸ್ವಲ್ಪ ದರ ಜಾಸ್ತಿ ಇದೆ. ಸಾಗಾಣೆಯ ವೆಚ್ಚವೂ ಜಾಸ್ತಿ ಬೀಳಲಿದೆ. ಈ ಬಗ್ಗೆ ಸಂಜೆ ಸಭೆ ಮಾಡಿ ಹೆಚ್ಚಿನ ಮಾಹಿತಿ ನೀಡುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.