ಬೆಂಗಳೂರಿನ ಐಟಿ ಕಂಪನಿಗೆ ಬಾಂಬ್ ಬೆದರಿಕೆ ಸತ್ಯ ಬಾಯ್ಬಿಟ್ಟ ಮಾಜಿ ಉದ್ಯೋಗಿ

ಬೆಂಗಳೂರು (ಜೂ.17): ಐಟಿ ಸಿಟಿ ಎಂದೇ ಖ್ಯಾತವಾಗಿರುವ ಬೆಂಗಳೂರಿನಲ್ಲಿ ಬಹುತೇಕ ಐಟಿ ಕಂಪನಿಗಳು ಕೇಂದ್ರೀಕೃತವಾಗಿರುವ ಬೆಳ್ಳಂದೂರಿನ ಆರ್‌ಎಂ ಝಡ್‌ ಇಕೋ ಸ್ಪೇಸ್‌ ಕ್ಯಾಂಪಸ್‌ನ ಕಂಪನಿಯೊಂದಕ್ಕೆ ಬಾಂಬ್‌ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಅದೇ ಕಂಪನಿಯ ಮಾಜಿ ಉದ್ಯೋಗಿ ಎಂದು ಹೇಳಲಾಗಿದೆ. ಇನ್ನು ಕಂಪನಿಗೆ ಬಾಂಬ್‌ ಇಟ್ಟಿರುವುದಾಗಿ ಹುಸಿ ಕರೆ ಮಾಡಿದ್ದ ಬಗ್ಗೆ ವಿಚಾರಣೆ ಮಾಡಿದ ಪೊಲೀಸರ ಮುಂದೆ ಮಾಜಿ ಉದ್ಯೋಗಿ ಸತ್ಯವನ್ನು ಬಾಯಿಬಿಟ್ಟಿದ್ದಾನೆ.

ಕಳೆದ ಮಂಗಳವಾರ ‘ಐಡಿಬಿಒ ರೈಸ್‌ ಪ್ರೈವೆಟ್‌ ಲಿಮಿಟೆಡ್‌ ಕಂಪನಿ’ಗೆ ಮಧ್ಯಾಹ್ನ 12ರ ಸುಮಾರಿಗೆ ಬಾಂಬ್‌ ಬೆದರಿಕೆ ಕರೆ ಬಂದಿತ್ತು. ವಿಷಯ ತಿಳಿದ ಕೂಡಲೇ ಬೆಳ್ಳಂದೂರು ಠಾಣೆ ಪೊಲೀಸರು, ಬಾಂಬ್‌ ನಿಷ್ಕ್ರೀಯ ದಳ, ಶ್ವಾನದಳ, ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದರು. ಮೊದಲಿಗೆ ಕಂಪನಿಯ ಉದ್ಯೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ, ಸುಮಾರು ಒಂದು ತಾಸು ಕಂಪನಿಯ ಕಟ್ಟಡ ಹಾಗೂ ಸುತ್ತಮುತ್ತಲ ಸ್ಥಳವನ್ನು ಇಂಚಿಂಚೂ ತಪಾಸಣೆ ಮಾಡಿದ್ದರು. ಈ ವೇಳೆ ಸ್ಥಳದಲ್ಲಿ ಯಾವುದೇ ಬಾಂಬ್‌ ಅಥವಾ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿಬಾಂಬ್‌ ಬೆದರಿಕೆ ಕರೆ ಎಂಬ ನಿರ್ಧಾರಕ್ಕೆ ಬಂದಿದ್ದರು. ಈ ಬಗ್ಗೆ ತನಿಖೆ ಮಾಡುತ್ತಾ ಹೋದ ಪೊಲೀಸರಿಗೆ ಇದೇ ಕಂಪನಿಯ ಮಾಜಿ ಉದ್ಯೋಗಿಯೇ ಬಾಂಬ್‌ ಇಟ್ಟಿರುವ ಬಗ್ಗೆ ಹುಸಿ ಕರೆ ಮಾಡಿರುವುದು ತಿಳಿದಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.