ನಾಗಪುರ: ವಿಚಿತ್ರ ಪ್ರಕರಣವೊಂದರಲ್ಲಿ ಮಹಿಳಾ ಡಾಕ್ಟರ್‌ನಂತೆ ವೇಷ ಧರಿಸಿ ಆಸ್ಪತ್ರೆಯ ಪುರುಷ ರೋಗಿಗಳನ್ನು ಸೆಳೆಯಲು ಯತ್ನಿಸುತ್ತಿದ್ದ ಸ್ಪೆಷಲ್ ಲೇಡಿ ಡಾಕ್ಟರ್ ಓರ್ವನನ್ನು ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಹಿಡಿದು ಪೊಲೀಸರಿಗೆ ನೀಡಿದ್ದಾರೆ. ನಾಗಪುರದ ಇಂದಿರಾಗಾಂಧಿ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ ಆವರಣದಲ್ಲಿ ಈ ಘಟನೆ ನಡೆದಿದೆ. ಬಂಧಿತ ವ್ಯಕ್ತಿಯನ್ನು 25 ವರ್ಷದ ಜಾವೇದ್ ಶೇಕ್ ಎಂದು ಗುರುತಿಸಲಾಗಿದ್ದು, ಈತ ತಜ್ಬಾಗ್ ನಿವಾಸಿಯಾಗಿದ್ದು ‘ಸಲಿಂಗಪ್ರೇಮಿ’ಯಾಗಿದ್ದ ಎಂದು ತಿಳಿದು ಬಂದಿದೆ.
ಬುರ್ಕಾ ಧರಿಸಿ ಮಹಿಳಾ ಡಾಕ್ಟರ್ ವೇಷ ಧರಿಸಿ ಆತ ಆಸ್ಪತ್ರೆಯ ಆವರಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದನ್ನು ನೋಡಿ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್‌ಗಳು ಆತನನ್ನು ಹಿಡಿದು ಆತನ ‘ಸ್ತ್ರೀ ವೇಷ’ ಕಳಚಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ತಾನೊರ್ವ ಟ್ರಾನ್ಸ್ ಜಂಡರ್ ಆಗಿದ್ದು, ಪುರುಷರ ಸ್ನೇಹಕ್ಕಾಗಿ ಮಹಿಳಾ ವೈದ್ಯೆಯ ವೇಷ ಧರಿಸಿ ಆಸ್ಪತ್ರೆಗೆ ಭೇಟಿ ನೀಡಿದ್ದೆ ಎಂಬ ವಿಚಾರವನ್ನು ಬಾಯ್ಬಿಟ್ಟಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ವೈದ್ಯಕೀಯ ಸೂಪರಿಟೆಂಡೆಂಟ್ ಡಾಕ್ಟರ್ ಸಾಗರ್ ಪಾಂಡೆ ಮಾತನಾಡಿ, ನಮ್ಮ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್‌ಗಳು ಈ ಹಿಂದೆ ಎಂದೂ ಈ ರೀತಿಯ ಡಾಕ್ಟರ್‌ಗಳನ್ನು ನೋಡಿರಲಿಲ್ಲ, ಪ್ರಾಮಾಣಿಕವಾಗಿ ಯಾವ ವೈದ್ಯರು ಹೀಗೆ ಮುಖ ಮುಚ್ಚಿಕೊಂಡು ಹೋಗುವುದಿಲ್ಲ, ನಮ್ಮ ಆಸ್ಪತ್ರೆಯಲ್ಲಿ ಮುಸ್ಲಿಂ ಮಹಿಳಾ ವೈದ್ಯರಿದ್ದರೆ ಅವರು ಹಿಜಾಬ್ ಧರಿಸುತ್ತಾರೆ. ಅದು ಅವರ ತಲೆಯನ್ನಷ್ಟೇ ಕವರ್ ಮಾಡುವುದರಿಂದ ಮುಖ ಕಾಣಿಸುತ್ತದೆ. ಆದರೆ ಈತ ಬುರ್ಖಾದಿಂದ ತನ್ನ ಇಡೀ ದೇಹವನ್ನು ಮುಚ್ಚಿದ್ದ. ಹೀಗಾಗಿ ಸೆಕ್ಯೂರಿಟಿ ಸಿಬ್ಬಂದಿಗೆ ಅಚ್ಚರಿಯಾಗಿತ್ತು. ಹೀಗಾಗಿ ಆತನನ್ನು ಕರೆದು ಬುರ್ಖಾ ತೆಗೆಯುವಂತೆ ಹೇಳಿದಾಗ ಬುರ್ಖಾದೊಳಗೆ ಇದ್ದ ವ್ಯಕ್ತಿ ಪುರುಷ ಎಂಬುದು ಗೊತ್ತಾಗಿದೆ. ಕೂಡಲೇ ನಾವು ಪೊಲೀಸರಿಗೆ ವಿಚಾರ ತಿಳಿಸಿದೆವು. ಏಕೆಂದರೆ ಇದೊಂದು ವಿಭಿನ್ನ ಪ್ರಕರಣವಾಗಿತ್ತು ಎಂದು ಹೇಳಿದ್ದಾರೆ.
ನಂತರ ಪೊಲೀಸರು ಆತನನ್ನು ವಿಚಾರಣೆ ನಡೆಸಿದ ಪೊಲೀಸರು ಹಲವು ವಿಚಾರಗಳನ್ನು ಬಯಲಿಗೆಳೆದಿದ್ದಾರೆ. ಜಾವೇದ್ ಬುರ್ಕಾ ಧರಿಸಿ ಅದರ ಮೇಲೆ ಮಹಿಳಾ ವೈದ್ಯರು ಧರಿಸುವ ಏಪ್ರನ್ ಧರಿಸಿ ಕಳೆದ 20 ದಿನಗಳಿಂದಲೂ ನಿರಂತರವಾಗಿ ಈ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದ. ನಂತರ ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿಗೆ ತನ್ನನ್ನು ವೈದ್ಯೆ ಆಯೇಷಾ ಸಿದ್ಧಿಕಿ ಎಂದು ಪರಿಚಯಿಸಿಕೊಂಡಿದ್ದ. ಜಾವೇದ್ ಪುರುಷ ರೋಗಿಗಳ ಮೇಲೆಯೇ ಹೆಚ್ಚಿನ ಗಮನವಿರಿಸಿದ್ದ. ಅಲ್ಲದೇ ಈತ ಅಲ್ಲಿನ ಇತರ ವೈದ್ಯರ ಜೊತೆಯೂ ತನ್ನ ಧ್ವನಿ ಬದಲಿಸಿ ಆಗಾಗ ಮಾತನಾಡುತ್ತಿದ್ದ, ಹೀಗಾಗಿ ಯಾರೊಬ್ಬರಿಗೂ ಈತನ ಮೇಲೆ ಸಂಶಯ ಬಂದಿರಲಿಲ್ಲ,
ಆದರೆ ಕಳೆದ ನಾಲ್ಕು ದಿನಗಳಿಂದ ಇದೇ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮಹಿಳಾ ಸೆಕ್ಯೂರಿಟಿ ಗಾರ್ಡ್ ಸಂತೋಷಿ ಅವರಿಗೆ ಈತನ ಚಲನವಲನ ವಿಚಿತ್ರವೆನಿಸಿದ್ದು, ಸಂಶಯ ಶುರುವಾಗಿದೆ. ಹೀಗಾಗಿ ಬುಧವಾರ ಬೆಳಗ್ಗೆ ಜಾವೇದ್ ಆಸ್ಪತ್ರೆಗೆ ಬುರ್ಕಾ ಧರಿಸಿ ಬರುತ್ತಿದ್ದಂತೆ ಸಂತೋಷಿ ಆತನಿಗೆ ಎದುರಾಗಿದ್ದು, ಆತನ ಬಳಿ ಹಲವು ಪ್ರಶ್ನೆಗಳನ್ನು ಕೇಳಿ ಬುರ್ಕಾ ತೆಗೆಯುವಂತೆ ಕೇಳಿದ್ದಾರೆ. ಆದರೆ ಪುರುಷ ಸಹೋದ್ಯೋಗಿಗಳ ಮುಂದೆ ತನಗೆ ಬುರ್ಕಾ ತೆಗೆಯುವುದಕ್ಕೆ ಮುಜುಗರವಾಗುತ್ತದೆ ಎಂದು ಹೇಳಿ ಬುರ್ಕಾ ತೆಗೆಯುವುದಕ್ಕೆ ನಿರಾಕರಿಸಿದ್ದಾನೆ.
ನಂತರ ಸಂತೋಷಿ ಆತನನ್ನು ಪ್ರತ್ಯೇಕವಾದ ಕೋಣೆಯೊಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಬುರ್ಕಾ ತೆಗೆಯುವಂತೆ ಸೂಚಿಸಿದ್ದಾರೆ. ಈ ವೇಳೆ ಆಕೆಗೆ ಶಾಕ್ ಆಗಿದ್ದು, ಬುರ್ಕಾದೊಳಗೆ ಮಹಿಳೆಯ ಬದಲು ಪುರುಷ ಇರುವುದು ಗೊತ್ತಾಗಿದೆ. ಕೂಡಲೇ ಆಕೆ ಆಸ್ಪತ್ರೆಯ ಭದ್ರತಾ ವಿಭಾಗಕ್ಕೆ ಮಾಹಿತಿ ನೀಡಿದ್ದು, ಅವರು ಫೋನ್ ಮಾಡಿ ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ. ಜಾವೇದ್ ಶೇಖನನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದು, ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 171, ಸೆಕ್ಷನ್ 380, ಸೆಕ್ಷನ್ 451 ಅಡಿ ಪ್ರಕರಣ ದಾಖಲಿಸಿದ್ದಾರೆ.