ಸಭೆ ಸಮಾರಂಭಗಳಲ್ಲಿ ಅತಿಥಿಗಳನ್ನು ಆದರಿಸಲು ಸಾವಿರಾರು ರೂಪಾಯಿಗಳನ್ನು ಹೂಗುಚ್ಛಗಳ ಖರೀದಿಗೆ ವ್ಯಯಿಸುತ್ತೇವೆ. ಕೌಟುಂಬಿಕ ಕಾರ್ಯಕ್ರಮಗಳಲ್ಲಿಯೂ ಸ್ನೆಹಿತರಿಗೂ ಸಂಬಂಧಿಕರಿಗೆ ಉಡುಗೊರೆ ಕೊಡಲು ಅನವಶ್ಯಕವಾಗಿ ಹಣ ಪೋಲು ಮಾಡುತ್ತೇವೆ. ಅದರ ಬದಲಾಗಿ ನೆನಪಿನಲ್ಲಿ ಉಳಿಯುವಂಥ, ಉಪಯುಕ್ತ ಮತ್ತು ಅರ್ಥಪೂರ್ಣ ಉಡುಗೊರೆಗಳನ್ನು ಕೊಡುವುದು ಬಹಳಷ್ಟು ಆಯಾಮಗಳಿಂದ ಸೂಕ್ತ ಎನ್ನಿಸುತ್ತದೆ. ಇದೀಗ ವೈರಲ್ ಆಗಿರುವ ಈ ಟ್ವೀಟ್ ಗಮನಿಸಿ. ಗದುಗಿನಲ್ಲಿರುವ ಐಎಫ್ಎಸ್ ಅಧಿಕಾರಿ ದೀಪಿಕಾ ಬಾಜಪೇಯಿ ಗುಳೇದಗುಡ್ಡ ಖಣಗಳ ಹೊದಿಕೆಯನ್ನು ಉಳ್ಳ ನೋಟ್ಬುಕ್ಗಳನ್ನು ಟ್ವೀಟ್ ಮಾಡಿದ್ದಾರೆ.
ಇಳಕಲ್ ಸೀರೆ ಮತ್ತು ಗುಳೇದಗುಡ್ಡ ಖಣದ ಮೆರುಗು, ಜವಾರೀತನ ಮತ್ತು ಆಪ್ತತೆಗಾಗಿ ಹೆಣ್ಣುಮಕ್ಕಳು ಹಂಬಲಿಸುತ್ತಾರೆ. ಇನ್ನು ಕೆಲ ಗಂಡಸರು ತನ್ನ ಅಕ್ಕ ತಂಗಿಯನ್ನೋ, ಗೆಳತಿಯನ್ನೋ, ಅಮ್ಮನನ್ನೋ, ಹೆಂಡತಿಯನ್ನೋ ಅಥವಾ ಪ್ರೀತಿಪಾತ್ರರನ್ನೋ ಇಂಥದೊಂದು ಸೀರೆ, ರವಿಕೆಯಲ್ಲಿ ನೋಡಬೇಕು ಎಂದು ಆಶಿಸುತ್ತಾರೆ. ಆದರೂ ಈ ಸೀರೆ ರವಿಕೆಗಳ ವಹಿವಾಟಿನ ಅಂಕಿ ಸಂಖ್ಯೆ ನೋಡಿದಾಗ ಆರಕ್ಕೆ ಏರದು ಮೂರಕ್ಕೆ ಇಳಿಯದು.
ಇದೀಗ ದೀಪಿಕಾ ಅವರ ಟ್ವೀಟ್ ಅನ್ನು ಸುಮಾರು 60,000 ಜನರು ನೋಡಿದ್ದಾರೆ. ನೂರಾರು ಜನರು ಈ ಖಣ ನೋಟ್ಬುಕ್ ತಯಾರಕರನ್ನು ಸಂಪರ್ಕಿಸುವುದು ಹೇಗೆ ಎಂದು ಕೇಳಿದ್ದಾರೆ. ದೀಪಿಕಾ ಇದೇ ಥ್ರೆಡ್ನಲ್ಲಿ ತಯಾರಕರ ಮೊಬೈಲ್ ನಂಬರ್ ಕೂಡ ನೀಡಿದ್ದಾರೆ. ಕೆಲ ಪ್ರಜ್ಞಾವಂತರಾದರೂ ಆ ಉತ್ಪನ್ನಗಳಿಗೆ ಹೊಸ ಆಯಾಮದಲ್ಲಿ ಮಾರುಕಟ್ಟೆ ಸೃಷ್ಟಿಸುತ್ತಿದ್ದಾರೆ ಮತ್ತು ಮಾರಾಟಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ ಎನ್ನುವುದು ಒಂದೆಡೆ ಸಮಾಧಾನವೆನ್ನಿಸಿದರೂ ಅದು ನೇಕಾರಿಕೆಯ ಕುಟುಂಬಗಳಿಗೆ ನಿರೀಕ್ಷಿತ ಆದಾಯ ತರಬಲ್ಲುದೇ ಎನ್ನುವ ಪ್ರಶ್ನೆಯೂ ಉದ್ಭವಿಸುತ್ತಿದೆ. ಇಂಥ ಕೆಲಸಗಳಿಗೆ ಒಟ್ಟಾಗಿ ಕೈಜೋಡಿಸಬೇಕಲ್ಲವೆ?