ಹಾವೇರಿ: ‘ರೈತರಿಗೆ ಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಿ’ ಎಂಬ ಸಚಿವರ ಸೂಚನೆ ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಕೊರತೆ ಎದುರಾಗಿದೆ. ಯೂರಿಯಾ ಹಾಗೂ ಇನ್ನಿತರ ಗೊಬ್ಬರದ ಅಭಾವದಿಂದ ರೋಸಿಹೋದ ಅನ್ನದಾತರು ಶುಕ್ರವಾರ ಗುತ್ತಲ ಪಟ್ಟಣದ ರುದ್ರಮುನಿ ಶಿವಯೋಗೀಶ್ವರ ವೃತ್ತದಲ್ಲಿ ಬಸ್ ಹಾಗೂ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಬಳಿಕ ರೈತ ಸಂಪರ್ಕ ಕೇಂದ್ರಕ್ಕೆ ರೈತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ಮಳಿಗೆಗಳಲ್ಲಿ ದುಬಾರಿ ಬೆಲೆಗೆ ಗೊಬ್ಬರ ಮಾರಾಟ.!
ಹೌದು ಒಂದೆಡೆ ದುಪ್ಪಟ್ಟು ಬೆಲೆಗೆ ಗೊಬ್ಬರ ಕೊಳ್ಳುವ ಪರಿಸ್ಥಿತಿ ಬಂದರೆ ಇನ್ನೊಂದೆಡೆ ಯೂರಿಯಾ ಗೊಬ್ಬರದೊಂದಿಗೆ ಜಿಂಕ್ ಖರೀದಿ ಮಾಡಬೇಕು ಎನ್ನುತ್ತಿದ್ದಾರೆ ಖಾಸಗಿ ಗೊಬ್ಬರ ಮಾರಾಟಗಾರರು. ಖಾಸಗಿ ಮಳಿಗೆದಾರರ ಈ ನಡೆಗೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವರ ಆದೇಶಕ್ಕೂ ಕ್ಯಾರೇ ಇಲ್ಲ.!
ಮೊನ್ನೆ ನಡೆದ ಪ್ರಗತಿ ಪರೀಶಿಲನಾ ಸಭೆಯಲ್ಲಿ ಗೊಬ್ಬರದ ಕೊರತೆ ನೀಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹಾಗೂ ಕೃಷಿ ಸಚಿವ ಬಿ.ಸಿ ಪಾಟೀಲ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದರು. ಸಚಿವರ ಸೂಚನೆಯನ್ನೂ ಅಧಿಕಾರಿಗಳು ನಿರ್ಲಕ್ಷಿಸಿದ್ದು ಸಹಕಾರಿ ಸಂಘ, ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಗೊಬ್ಬರ ಪೂರೈಕೆ ಮಾಡಿಲ್ಲ.
ಕೃಷಿ ಚಟುವಟಿಕೆ ಆರಂಭವಾಗುವ ಹೊತ್ತಿಗೇ ಗೊಬ್ಬರವಿಲ್ಲ.!
ಜಿಲ್ಲೆಯಲ್ಲಿ ಮಳೆ ಕೊಂಚ ಕಡಿಮೆಯಾದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಆದರೆ ಇಂತಹ ಸಮಯದಲ್ಲೇ ಗೊಬ್ಬರದ ಅಭಾವ ಎದುರಾಗಿರುವುದು ರೈತರನ್ನ ಸಂಕಷ್ಟಕ್ಕೆ ದೂಡಿದೆ. ಇನ್ನಾದರೂ ಸಂಬಧಪಟ್ಟ ಇಲಾಖೆ ಇತ್ತ ಗಮನ ಹರಿಸಿ ಗೊಬ್ಬರ ಸಮಸ್ಯೆಗೆ ಪರಿಹಾರ ಒದಗಿಸಲಿ ಎನ್ನುವುದು ಅನ್ನದಾತರ ಆಗ್ರಹವಾಗಿದೆ.