ಬೆಳಗಾವಿ: ಜಿಲ್ಲೆಯಲ್ಲಿ ಬೆಳಗಾವಿ, ಧಾರವಾಡ, ಬಾಗಲಕೋಟ, ಗದಗ ಜಿಲ್ಲೆಯ ಜೀವನಾಡಿಯಾದ ಮಲಪ್ರಭಾ ಖಾಲಿಯಾಗಿದ್ದಾಳೆ. ಇದರಿಂದ ಜಿಲ್ಲೆ ಸೇರಿ ಸವದತ್ತಿ, ಹುಬ್ಬಳ್ಳಿ, ಧಾರವಾಡಕ್ಕೆ ನೀರಿನ ಅಭಾವವಾಗುವ ಚಿಂತೆ ಎದುರಾಗಿದೆ. ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ನವಿಲು ತೀರ್ಥ ಜಲಾಶಯ ಬಹುತೇಕ ಖಾಲಿಯಾಗಿದೆ. ಇನ್ನೊಂದು ವಾರದಲ್ಲಿ ಮಳೆ ಆಗದಿದ್ದರೆ, ಜಿಲ್ಲೆಯ ಜನರಿಗೆ ಕಂಟಕ ಕಾದಿದೆ. ಈ ಹಿನ್ನಲೆ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ಜಲ ದಿಗ್ಬಂಧನ ಹಾಕಿ ದೇವರಿಗೆ ಶಿಕ್ಷೆ ನೀಡಿದ್ದಾರೆ. ಹೌದು ಬರಗಾಲದ ಮುನ್ಸೂಚನೆಗೆ ಹೆದರಿ ಗ್ರಾಮದ ಸೂರ್ಯನಾರಾಯಣ ದೇವಸ್ಥಾನದ ಗರ್ಭಗುಡಿಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ನೀರು ಹಾಕಿ, ಜಲ ದಿಗ್ಬಂಧನ ಮಾಡುವ ಮೂಲಕ ದೇವರನ್ನೇ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.
ಮಲಪ್ರಭಾ ನದಿಯಿಂದ ನೀರು ತಂದು ದೇವರ ಮೂರ್ತಿ, ಗರ್ಭ ಗುಡಿಗೆ ಸುರಿದ ಗ್ರಾಮಸ್ಥರು
ಹೌದು 7 ದಿನಗಳ ಕಾಲ ಜಲ ದಿಗ್ಬಂಧನ ಹಾಕಿದಾಗ ಮಳೆಯಾಗುವ ವಾಡಿಕೆ ಈ ಗ್ರಾಮದಲ್ಲಿದೆ. ಬರಗಾಲದ ಸೂಚನೆ ಸಿಕ್ಕಾಗ ಗ್ರಾಮಸ್ಥರೆಲ್ಲರೂ ಸೇರಿ ಜಲ ದಿಗ್ಬಂಧನ ಹಾಕುತ್ತಾರೆ. 7 ದಿನಗಳ ನಂತರ ದೇವಸ್ಥಾನದ ಬಾಗಿಲು ಓಪನ್ ಮಾಡಿ, ಗ್ರಾಮಸ್ಥರು ಸೂರ್ಯನಾರಾಯಣ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಅದರಂತೆ ಇದೀಗ ಗರ್ಭಗುಡಿಯಲ್ಲಿ ನೀರು ಹಾಕಿ, ಬೀಗ ಹಾಕಿದ್ದಾರೆ.
ಜೂನ್ ತಿಂಗಳು ಶುರುವಾಗಿ ಈಗಾಗಲೇ ಅರ್ಧ ತಿಂಗಳು ಕಳೆದಿದ್ದು, ಆದರೂ ಕೂಡ ಮುಂಗಾರು ಮಳೆ ಇನ್ನು ಬಂದಿಲ್ಲ. ಇದರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಲಕಂಟಕ ಎದುರಾಗಿದ್ದು, ಉತ್ತರ ಕರ್ನಾಟಕದಲ್ಲಿ ಬರಗಾಲ ಛಾಯೆ ಮೂಡಿದೆ. ಜಿಲ್ಲೆಯ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ, ವೇದಗಂಗಾ, ದೂಧ್ ಗಂಗಾ, ಮಾರ್ಕಂಡೇಯ ಹೀಗೆ ಏಳಕ್ಕೆ ಏಳು ನದಿಗಳು ಬತ್ತುವ ಆತಂಕ ಎದುರಾಗಿದೆ.