ಬೆಂಕಿ ಅವಘಡಕ್ಕೆ 5 ಮಕ್ಕಳು ಸೇರಿದಂತೆ 6 ಮಂದಿ ಬಲಿ, ರಾತ್ರಿ ಊಟ ಮಾಡಿ ಮಲಗಿದವರು ಬೆಳಗಾಗುವುದರೊಳಗೆ ಸುಟ್ಟು ಕರಕಲಾಗಿದ್ರು!

ಲಕ್ನೋ: ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ರಾಮ್‌ಕೋಲಾ ಪೊಲೀಸ್ ಠಾಣೆಯ ಉರ್ಧಾ ಗ್ರಾಮದಲ್ಲಿ ಭೀಕರ ಬೆಂಕಿ ದುರಂತ ಸಂಭವಿಸಿದೆ. ಬೆಂಕಿ ಅವಘಡಕ್ಕೆ ಒಂದೇ ಕುಟುಂಬದ 6 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಓರ್ವ ಮಹಿಳೆ ಹಾಗೂ ಆಕೆಯ 5 ಮಕ್ಕಳು ಸೇರಿದ್ದಾರೆ. ಬುಧವಾರ ತಡರಾತ್ರಿ ಸಂಭವಿಸಿದ ಈ ದಾರುಣ ಘಟನೆಯಿಂದ ಇಡೀ ಸುತ್ತಮುತ್ತ ಪ್ರದೇಶದಲ್ಲಿ ಕೋಲಾಹಲ ಉಂಟಾಗಿದೆ. ಘಟನೆ ವೇಳೆ ಮಹಿಳೆ ಸಂಗೀತಾ ತಮ್ಮ 5 ಮಕ್ಕಳೊಂದಿಗೆ ಮನೆಯೊಳಗೆ ಮಲಗಿದ್ದರು, ಆಕೆಯ ಪತಿ ಹೊರಗೆ ಮಲಗಿದ್ದರು. ಸಂಗೀತಾ ಮತ್ತು ಅವರ 5 ಮಕ್ಕಳು ಬೆಂಕಿ ಬಿದ್ದಾಗ ಮನೆಯೊಳಗೆ ಸಿಕ್ಕಿಹಾಕಿಕೊಂಡಿದ್ದು, ಅವರೆಲ್ಲರೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ರಾತ್ರಿ ಇದ್ದಕ್ಕಿದ್ದಂತೆ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಎಚ್ಚರಗೊಂಡ ನವಮಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ, ಆದರೆ ಅಷ್ಟು ಇಡೀ ಮನೆಗೆ ಬೆಂಕಿ ಆವರಿಸಿದೆ. ಕಾಲುವೆ ದಡದಲ್ಲಿರುವ ಒಂಟಿ ಮನೆಯಿಂದಾಗಿ ಗ್ರಾಮದ ಜನರೂ ತಕ್ಷಣ ಸಹಾಯಕ್ಕೆ ಬರಲು ಸಾಧ್ಯವಾಗಿಲ್ಲ.

ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಘಟನೆಯ ಮಾಹಿತಿ ಪಡೆದ ಡಿಎಂ ಮತ್ತು ಎಸ್ಪಿ ರಾತ್ರಿಯೇ ಸ್ಥಳಕ್ಕೆ ಆಗಮಿಸಿದರು. ಎಲ್ಲಾ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ನಂತರ, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.