ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ

ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿ ಸಿಬಿಎಸ್‌ಇ 12 ನೇ ತರಗತಿ ಫಲಿತಾಂಶವನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಕೇರಳದ ತಿರುವನಂತಪುರ ಶೇ. 98.83 ಫಲಿತಾಂಶ ಪಡೆದು ನಂ.1 ಸ್ಥಾನದಲ್ಲಿದ್ದರೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಶೇ. 83.71 ಫಲಿತಾಂಶ ಪಡೆದು ಕೊನೆಯ ಸ್ಥಾನದಲ್ಲಿದೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

12 ನೇ ತರಗತಿಯ ಎರಡು ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳ ಜೊತೆಗೆ ಟರ್ಮ್ 1 ಮತ್ತು 2 ರ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿದೆ. ಪರೀಕ್ಷೆಯನ್ನು ಆಫ್‌ಲೈನ್ ಮೋಡ್‌ನಲ್ಲಿ ಏಪ್ರಿಲ್ 26, 2022 ರಿಂದ ಜೂನ್ 15, 2022 ರವರೆಗೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಈ ವರ್ಷ ಒಟ್ಟು 14,44,341 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಆದರೆ 14,35.366 ಪರೀಕ್ಷೆ ಬರೆದಿದ್ದರು. ಈ ಪೈಕಿ 13,30,662 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

33 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು 95% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. 1.34 ಲಕ್ಷ ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 2021 ರಲ್ಲಿ 99.37% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಶಾಲೆಯ ಕೋಡ್, ರೋಲ್ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ಅಧಿಕೃತ ವೆಬ್‌ಸೈಟ್ cbseresults.nic.in ನಲ್ಲಿ ನೋಡಬಹುದಾಗಿದೆ.