ಡಿಸಿಎಂ ಡಿ.ಕೆ. ಶಿವಕುಮಾರ್ ಗೆ ಪತ್ರ ಬರೆದ ನಿರ್ದೇಶಕ ಶಶಾಂಕ್: ಏನಿದೆ ಪತ್ರದಲ್ಲಿ?


ನ್ನಡದ ಖ್ಯಾತ ನಿರ್ದೇಶಕ ಶಶಾಂಕ್ , ಬೆಂಗಳೂರು ಅಭಿವೃದ್ಧಿ ಕುರಿತಾಗಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ತುರ್ತಾಗಿ ಬೆಂಗಳೂರಿಗೆ ಆಗಬೇಕಾಗಿದ್ದೇನು ಎನ್ನುವುದನ್ನು ಆ ಪತ್ರದಲ್ಲಿ ತಿಳಿಸಿದ್ದಾರೆ. ಆ ಪತ್ರವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಶಶಾಂಕ್ ಪತ್ರಕ್ಕೆ ಬೆಂಗಳೂರಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಅವರಿಗೆ ಬರೆದ ಪತ್ರದಲ್ಲಿ ‘ನಮ್ಮೆಲ್ಲರ ಹೆಮ್ಮೆಯ ಬೆಂಗಳೂರು ನಗರ, ಹಲವಾರು ಮೂಲಭೂತ ಸೌಲಭ್ಯಗಳ ಕೊರತೆಯಿಂದ ನರಳುತ್ತಿರುವುದು ತಮಗೆ ಗೊತ್ತೇ ಇದೆ. ತಾವು ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಇದರ ನಿವಾರಣೆಯ ಕುರಿತಾಗಿ ಕಾರ್ಯಪ್ರವೃತ್ತರಾಗಿರುವುದು ನಿಜಕ್ಕೂ ಶ್ಲ್ಯಾಘನೀಯ. ಇದೀಗ, ಕನ್ನಡಿಗರು ಅತ್ಯಂತ ತುರ್ತಾಗಿ ಎದುರು ನೋಡುತ್ತಿರುವ ಎರಡು ಯೋಜನೆಗಳನ್ನು ನಿಮ್ಮ ಗಮನಕ್ಕೆ ತರುವುದು ನನ್ನ ಈ ಪತ್ರದ ಮೂಲಕ ಉದ್ದೇಶ’ ಎಂದು ಶಶಾಂತ್ ಪತ್ರ ಶುರು ಮಾಡಿದ್ದಾರೆ.

ಮುಂದುವರೆದು, ‘ಮೊದಲನೆಯದು- ನೆಲಮಂಗಲ ರಸ್ತೆಯ ಗೊರಗುಂಟೆ ಪಾಳ್ಯ ಜಂಕ್ಷನ್. ರಾಜಧಾನಿಯಿಂದ ಮುಕ್ಕಾಲು ಭಾಗ ಕರ್ನಾಟಕಕ್ಕೆ ಹೋಗಲು, ಇದೇ ಹೆಬ್ಬಾಗಿಲು. ಹಲವಾರು ವರ್ಷಗಳಿಂದ ಇಲ್ಲಿ ಆಗುತ್ತಿರುವುದು ಟ್ರಾಫಿಕ್ ಜಾಮ್. ಅಸಹನೀಯವಾಗಿದೆ. ಶೀಘ್ರವೇ ಇದಕ್ಕೆ ಪರಿಹಾರ ಕಲ್ಪಿಸಿ’ ಎಂದು ಮೊದಲ ಬೇಡಿಕೆಯನ್ನು ಇಟ್ಟಿದ್ದು, ನಂತರ ಮತ್ತೊಂದು ಮಹತ್ವದ ಯೋಜನೆ ಬಗ್ಗೆಯೂ ಬರೆದುಕೊಂಡಿದ್ದಾರೆ.

ಎರಡನೆಯದು ‘ ನೆಲಮಂಗಲ ಫ್ಲೈ ಓವರ್ ಮೇಲಿನ ಹೊರೆತಗ್ಗಿಸಲು ಅಭಿವೃದ್ಧಿಪಡಿಸಲಾಗುತ್ತಿರುವ ಮಾಗಡಿ ರಸ್ತೆ ವಿಚಾರ. ಒಮ್ಮೆ ಈಗಿನ ರಸ್ತೆ ಕಾಮಗಾರಿ ಪೂರ್ತಿಯಾಗಿ ಸಂಚಾರಕ್ಕೆ ಮುಕ್ತಗೊಂಡರೆ, ಅದೇ ರಸ್ತೆಯಲ್ಲಿರುವ ಸುಂಕದಕಟ್ಟಿ ಈಗಿನ ಗೊರಗುಂಟೆ ಪಾಳ್ಯ ಜಂಕ್ಷನಂತೆ ಮುಂದಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆಗಳನ್ನು ಸೃಷ್ಟಿಸುವುದು ಪಕ್ಕಾ. ಆದ್ದರಿಂದ ಈಗಲೇ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಸೂಕ್ತ. ಈ ಎರಡೂ ಯೋಜನೆಗಳು ರಾಜಧಾನಿಯನ್ನು ಬಹುತೇಕ ಕರ್ನಾಟಕಕ್ಕೆ ಸಂಪರ್ಕಿಸುವ ಮತ್ತು ಕನ್ನಡಿಗರು ಅತೀ ಹೆಚ್ಚು ವಾಸವಿರುವ ಭಾಗಗಳು. ಇವುಗಳ ಅನುಷ್ಠಾನ, ಆ ಭಾಗದ ಕನ್ನಡಿಗರಿಗೆ ನೀವು ನೀಡುವ ಉತ್ತಮ ಕಾಣಿಕೆಯಾಗುತ್ತವೆ’ ಎಂದು ಶಶಾಂಕ್ ಪತ್ರದಲ್ಲಿ ಬರೆದಿದ್ದಾರೆ.