ನೀರು ಕುಡಿಸಿ ಒಂಟೆಯ ಜೀವ ಉಳಿಸಿದ ಚಾಲಕನ ವಿಡಿಯೋ ವೈರಲ್

ನೀರಿಲ್ಲದೆ ನಿತ್ರಾಣಗೊಂಡು ರಸ್ತೆಬದಿ ಕುಳಿತಿದ್ದ ಒಂಟೆಯನ್ನು ಚಾಲಕನೊಬ್ಬ ಗಮನಿಸಿದ್ದಾನೆ. ತಕ್ಷಣವೇ ನೀರುಣಿಸಿ ಅದರ ಜೀವ ಕಾಪಾಡಿದ್ದಾನೆ. ನೆಟ್ಟಿಗರು ಈ ಕರುಣಾಳುವನ್ನು ಪ್ರಶಂಸಿಸುತ್ತಿದ್ದಾರೆ.

ನೀರಿಲ್ಲದೆ ದೀರ್ಘಸಮಯದವರೆಗೆ ಜೀವಿಸುವ ಅದ್ಭುತ ಸಾಮರ್ಥ್ಯವನ್ನು ಒಂಟೆಗಳು ಹೊಂದಿವೆ. ಆದರೂ ಮರುಭೂಮಿಯ ಶಾಖ ತೀವ್ರತೆಯಿಂದ ಕೂಡಿದಾಗ ಇವುಗಳು ಪ್ರಾಣಾಪಾಯಕ್ಕೀಡಾಗುವ ಸಾಧ್ಯತೆ ಇರುತ್ತದೆ. ಆಗ ಹೀಗೆ ಯಾರಾದರೂ ದಯಾಮಯಿಗಳು ಅವುಗಳನ್ನು ಪೋಷಿಸಿದರೆ ಕೆಲಕ್ಷಣಳಲ್ಲೇ ಚೇತರಿಸಿಕೊಂಡುಬಿಡುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ.

ಈ ವಿಡಿಯೋ ಅನ್ನು ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ ಟ್ವೀಟ್ ಮಾಡಿ ಪ್ರಾಣಿದಯೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇದೇ 11 ರಂದು ಹಂಚಿಕೊಂಡ ಈ ವಿಡಿಯೋ ಅನ್ನು 1.5 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.

ದೇವರು ಈ ಮನುಷ್ಯನಿಗೆ ಒಳ್ಳೆಯದನ್ನು ಮಾಡಲಿ. ಮರಭೂಮಿಗರಿಗೆ ಇವನ ನಡೆ ಮಾದರಿಯಾಗಲಿ. ನಿಮ್ಮ ಸುತ್ತಮುತ್ತಲೂ ಅನೇಕ ಜೀವಿಗಳು ಹೀಗೆ ನಿರ್ಜಲೀಕರಣದಿಂದ ಬಸವಳಿಯುತ್ತಿರುತ್ತವೆ, ದಯವಿಟ್ಟು ಅವುಗಳನ್ನು ಪೋಷಿಸಿ. ಜೀವಸಂಕುಲವು ಪರಸ್ಪರರ ಸಹಾಯದಿಂದ ಅಭಿವೃದ್ಧಿ ಕಾಣುತ್ತದೆ… ಅಂತೆಲ್ಲ ಅನೇಕರು ಪ್ರತಿಕ್ರಿಯಿಸಿದ್ದಾರೆ.