ನವದೆಹಲಿ: ಭಾರತದ ಅತಿದೊಡ್ಡ ಐಟಿ ಸಂಸ್ಥೆ ಎನಿಸಿರುವ ಮತ್ತು 6 ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕೊಟ್ಟಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಅನಿರೀಕ್ಷಿತ ಬೆಳವಣಿಗೆಗೆ ಸಾಕ್ಷಿಯಾಗಿದೆ. ಮೂರು ವರ್ಷಗಳಿಂದ ವರ್ಕ್ ಫ್ರಂ ಹೋಮ್ನಲ್ಲಿದ್ದ ಉದ್ಯೋಗಿಗಳಿಗೆ ಕಚೇರಿಗೆ ಬಂದು ಕೆಲಸ ಮಾಡುವಂತೆ ಕಡ್ಡಾಯಪಡಿಸಿದ ಬೆನ್ನಲ್ಲೇ ಮಾಸ್ ರೆಸಿಗ್ನೇಶನ್ ನಡೆದಿದೆ. ಅದೂ ರಾಜೀನಾಮೆ ನೀಡುತ್ತಿರುವವರಲ್ಲಿ ಬಹುತೇಕರು ಮಹಿಳೆಯರೇ ಆಗಿದ್ದಾರೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಟಿಸಿಎಸ್ ಸೇರಿದಂತೆ ಎಲ್ಲಾ ಐಟಿ ಕಂಪನಿಗಳು ತಮ್ಮ ಉದ್ಯೋಗಗಳಿಗೆ ಮನೆಯಿಂದ ಕೆಲಸ ಮಾಡಲು ಅನುಮತಿಸಿತ್ತು. ಈಗ ಜಗತ್ತಿನಲ್ಲೆಡೆ ಕಂಪನಿಗಳು ವರ್ಕ್ ಫ್ರಂ ಹೋಂ ನಿಲ್ಲಿಸಿ ಕಚೇರಿಗೆ ಬಂದು ಕೆಲಸ ಮಾಡುವಂತೆ ಕಡ್ಡಾಯಪಡಿಸುತ್ತಿವೆ. ಉದ್ಯೋಗಿಗಳಿಗೆ ಕೆಲಸ ಮಾಡಲು ಪ್ರಶಸ್ತ ವಾತಾವರಣ ಹೊಂದಿದೆ ಎಂಬ ಕಾರಣಕ್ಕೆ ಖ್ಯಾತವಾಗಿರುವ ಟಿಸಿಎಸ್ ಕೂಡ ವರ್ಕ್ ಫ್ರಂ ಹೋಮ್ ಸೌಲಭ್ಯವನ್ನು ನಿಲ್ಲಿಸಿದೆ. ಆದರೆ, ಮಹಿಳಾ ಉದ್ಯೋಗಿಗಳಿಗೆ ಇದು ಅಪಥ್ಯವಾದಂತಿದೆ.
ಟಿಸಿಎಸ್ನ ಒಟ್ಟು ಉದ್ಯೋಗಿಗಳಲ್ಲಿ ಮಹಿಳೆಯರ ಸಂಖ್ಯೆ ಶೇ. 35ಕ್ಕಿಂತ ಹೆಚ್ಚಿದೆ. ಟಿಸಿಎಸ್ನ ಉನ್ನತ ಸ್ತರ ಉದ್ಯೋಗಗಳಲ್ಲಿ ಮಹಿಳೆಯರೇ ಮುಕ್ಕಾಲು ಪಾಲು ಇದ್ದಾರೆ. ಮಹಿಳಾ ಉದ್ಯೋಗಿಗಳಿಗೆ ಹೆಚ್ಚು ಆದ್ಯತೆ ಕೊಡುವ ಐಟಿ ಕಂಪನಿಗಳಲ್ಲಿ ಟಿಸಿಎಸ್ ಕೂಡ ಒಂದು. ಈಗ ಎಷ್ಟು ಮಂದಿ ರಾಜೀನಾಮೆ ಕೊಟ್ಟಿದ್ದಾರೆ ಎಂಬ ಮಾಹಿತಿ ತಿಳಿದುಬಂದಿಲ್ಲ. ಕಳೆದ ವರ್ಷ ಟಿಸಿಎಸ್ನಲ್ಲಿ ಶೇ. 20ರಷ್ಟು ಉದ್ಯೋಗಿಗಳು ಕೆಲಸ ಬಿಟ್ಟಿದ್ದರು.
ನ್ಯೂಸ್18ನಲ್ಲಿ ಬಂದಿರುವ ವರದಿ ಪ್ರಕಾರ ಟಿಸಿಎಸ್ನಲ್ಲಿ ಮಹಿಳಾ ಉದ್ಯೋಗಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಲು ವರ್ಕ್ ಫ್ರಂ ಹೋಂ ಸೌಲಭ್ಯ ನಿಲ್ಲಿಸಿದ್ದು ಪ್ರಮುಖ ಕಾರಣ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮಿಲಿಂದ್ ಲಕ್ಕಡ್ ಹೇಳಿದ್ದಾರೆ. ಕೆಲಸದಲ್ಲಿ ತಾರತಮ್ಯವಾಗಿ ಮಹಿಳೆಯರು ರಾಜೀನಾಮೆ ನೀಡಿರುವ ಸಾಧ್ಯತೆಯನ್ನು ಮಿಲಿಂದ್ ತಳ್ಳಿಹಾಕಿದ್ದಾರೆ. ಟಿಸಿಎಸ್ನಲ್ಲಿ ಹಿಂದೆಲ್ಲ ಮಹಿಳೆಯರು ರಾಜೀನಾಮೆ ನೀಡುವ ಪ್ರಮಾಣ ಪುರುಷ ಉದ್ಯೋಗಿಗಳಿಗೆ ಹೋಲಿಸಿದರೆ ಕಡಿಮೆಯೇ. ಈ ಬಾರಿ ಮಾತ್ರ ಪುರುಷರಿಗಿಂತ ಮಹಿಳೆಯರೇ ಹೆಚ್ಚು ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆಗೆ ಬೇರೆ ಬೇರೆ ಕಾರಣಗಳಿರಬಹುದಾದರೂ ಪ್ರಮುಖ ಕಾರಣ ಮಾತ್ರ ವರ್ಕ್ ಫ್ರಂ ಹೋಂ ರದ್ದತಿ ಎಂಬುದು ಮಿಲಿಂದ್ ವಾದ.
ಕೋವಿಡ್ ಕಾರಣಕ್ಕೆ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಸೌಲಭ್ಯ ನೀಡಲಾಗಿತ್ತು. ಹಲವು ಸಮೀಕ್ಷೆಗ ಪ್ರಕಾರ, ಈ ಸೌಲಭ್ಯದಿಂದಾಗಿ ಕೆಲಸದ ಔಟ್ಪುಟ್ ಹೆಚ್ಚಾಗಿದೆ. ಕಂಪನಿಗಳಿಗೂ ಕೆಲವೊಂದಿಷ್ಟು ಆಡಳಿತಾತ್ಮಕ ವೆಚ್ಚ ತಗ್ಗಿದೆ ಎನ್ನಲಾಗಿತ್ತು. ಆದರೆ, ಮನೆಯಿಂದ ಕೆಲಸ ಮಾಡಿದರೆ ತಂಡಗಳನ್ನು ನಿರ್ವಹಿಸುವುದು ಕಷ್ಟ ಎಂಬ ವಾದ ಕಂಪನಿಯ ಮ್ಯಾನೇಜ್ಮೆಂಟ್ಗಳದ್ದು. ಹಲವು ಸಿಇಒಗಳು ವರ್ಕ್ ಫ್ರಂ ಹೋಮ್ ಅನ್ನು ಅಪರಾಧವೆಂಬಂತೆ ಪರಿಗಣಿಸಿರುವುದುಂಟು.