ಗುರುಗ್ರಾಮ: 20 ವರ್ಷಗಳ ಅವಧಿಯಲ್ಲಿ ವಿವಿಧ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳ ಮೂಲಕ 50 ಮಹಿಳೆಯರನ್ನು ಮದುವೆಯಾಗಿ ನಂಬಿಸಿ, ಲಕ್ಷ ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ 55 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಗುರುಗ್ರಾಮ ಪೊಲೀಸರು ತಿಳಿಸಿದ್ದಾರೆ. ಜೆಮ್‌ಶೆಡ್‌ಪುರ ಮೂಲದ ತಪೇಶ್‌ನನ್ನು ಗುರುಗ್ರಾಮ್ ಪೊಲೀಸರು ಗುರುವಾರ ಒಡಿಶಾದಲ್ಲಿ ಬಂಧಿಸಿದ್ದಾರೆ. ಆರೋಪಿಗೆ 1992ರಲ್ಲಿ ಕೋಲ್ಕತ್ತಾದಲ್ಲಿ ಮೊದಲ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆರೋಪಿಯು 2000 ಇಸ್ವಿಯಲ್ಲಿ ಕಣ್ಮರೆಯಾದ. ಆಮೇಲೆ ತನ್ನ ಪತ್ನಿ ಮತ್ತು ಪುತ್ರಿಯರನ್ನೂ ತೊರೆದಿದ್ದಾನೆ.
ಇತ್ತೀಚೆಗೆ ಗುರುಗ್ರಾಮ್‌ನಲ್ಲಿ ಮಹಿಳೆಯೊಬ್ಬರು ಪ್ರಕರಣವನ್ನು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅದರಲ್ಲಿ ಅವರು ಮ್ಯಾರೇಜ್ ಆ್ಯಪ್ ಮೂಲಕ ಆರೋಪಿಯನ್ನು ಭೇಟಿಯಾಗಿದ್ದು, ತಾವಿಬ್ಬರೂ ಶಾಸ್ತ್ರೋಕ್ತವಾಗಿ ವಿವಾಹ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ ಮದುವೆಯಾದ ಮೂರು ದಿನಗಳ ನಂತರ ಆರೋಪಿಯು ಮಹಿಳೆಯ ಚಿನ್ನಾಭರಣ ಸೇರಿದಂತೆ 20 ಲಕ್ಷ ರೂಪಾಯಿ ವಂಚಿಸಿ ಪರಾರಿಯಾಗಿದ್ದ.
ಈ ನಡುವೆ ಆರೋಪಿಯು ಬೆಂಗಳೂರಿಗೆ ತೆರಳಿ ‘ಸ್ಮಾರ್ಟ್ ಹೈರ್ ಸೊಲ್ಯೂಷನ್’ ಎಂಬ ಹೆಸರಿನ ಉದ್ಯೋಗ ನಿಯೋಜನೆ ಏಜೆನ್ಸಿ ತೆರೆದಿರುವುದು ತನಿಖೆಯ ವೇಳೆ ಪೊಲೀಸರಿಗೆ ತಿಳಿದು ಬಂದಿದೆ. ಆರೋಪಿಯು ಕೆಲಸ ಕೊಡಿಸುವುದಾಗಿ ಪುರುಷ ಮತ್ತು ಮಹಿಳೆಯರಿಗೆ ವಂಚಿಸುತ್ತಿದ್ದ. ಆದರೆ ಈ ವಂಚನೆಯ ಕೃತ್ಯ ಹೆಚ್ಚು ದಿನ ನಡೆಯದೇ ಇದ್ದಾಗ ಶಾದಿ ಆ್ಯಪ್ ಮೂಲಕ ವಿಚ್ಛೇದಿತ, ವಿಧವೆ ಮತ್ತು ವಿವಾಹಿತ ಮಹಿಳೆಯರೊಂದಿಗೆ ಡೇಟಿಂಗ್ ಆರಂಭಿಸಿದ್ದ. ಅವನು ಮಧ್ಯವಯಸ್ಕ ಮಹಿಳೆಯರೊಂದಿಗೆ ಸಂಬಂಧ ಬೆಳೆಸಿ, ವಂಚಿಸಲು ಪ್ರಾರಂಭಿಸಿದ್ದ.
ಆರೋಪಿಯು ಕಳೆದ 20 ವರ್ಷಗಳಲ್ಲಿ 50 ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿದ್ದಾನೆ ಮತ್ತು ಅವರನ್ನೆಲ್ಲ ವಂಚಿಸಿದ್ದಾನೆ. ಸಧ್ಯಕ್ಕೆ ಆರೋಪಿಯನ್ನು ಒಡಿಶಾದ ಮಾದಕ ವ್ಯಸನ ಕೇಂದ್ರದಲ್ಲಿ ಬಂಧಿಸಲಾಗಿದೆ. ಅವನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.