ಚಿಕ್ಕಮಗಳೂರು: ಮೊದಲೇ ನಮ್ಮ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಖಚಿತ! ಅಂಥಾದ್ದರಲ್ಲಿ KSRTC ಬಸ್ ಕಂಡಕ್ಟರ್ 5 ಪಟ್ಟು ಹೆಚ್ಚು ದರದ ಟಿಕೆಟ್ ಕೊಟ್ರೆ ಪ್ರಯಾಣಿಕರಿಗೆ ಹೆಂಗಾಗಬೇಡ!? KSRTC ಬಸ್ ಕಂಡಕ್ಟರ್ ಮಾಡಿರುವ ಈ ಅಚಾತುರ್ಯದಿಂದ ಪ್ರವಾಸಿಗರು ಕಂಗಾಲಾಗಿದ್ದಾರೆ. ಜೊತೆಗೆ, ಅವರು ಆಂಧ್ರ ಮೂಲದ ಪ್ರವಾಸಿಗರು . ಬಸ್ ಟಿಕೆಟ್ ದರ ನೋಡಿ ಕಂಗಾಲಾಗಿದ್ದಾರೆ.
ಪರ ರಾಜ್ಯಗಳ ಪ್ರಯಾಣಿಕರಿಗೆ ಉಚಿತ ಬಸ್ ಪ್ರಯಾಣ ಅನ್ವಯವಾಗೋಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆಯೇನೋ ಸರಿ. ಆದರೆ ಕಂಡಕ್ಟರ್ ಮಹಾಶಯ ಐದು ಪಟ್ಟು ದುಬಾರಿಯ ಟಿಕೆಟ್ ನೀಡಿಬಿಟ್ಟರೆ ಗತಿಯೇನು? ಅಷ್ಟಕ್ಕೂ ಕಂಡಕ್ಟರ್ ಮಾಡಿರುವ ಯಡವಟ್ಟು ಕೆಲಸ ಏನೆಂದರೆ ಚಿಕ್ಕಮಗಳೂರು ಬದಲು ಮಂಗಳೂರಿಗೆ ಟಿಕೆಟ್ ನೀಡಿ ಕೈತೊಳೆದುಕೊಂಡಿದ್ದಾರೆ. 45 ರೂಪಾಯಿ ಟಿಕೆಟ್ ಬದಲು 202 ರೂಪಾಯಿ ಟಿಕೆಟ್ ನೀಡಿಬಿಟ್ಟಿದ್ದಾನೆ ಪುಣ್ಯಾತ್ಮ.
ಆಂಧ್ರ ಮೂಲದ ಒಟ್ಟು 18 ಜನ ಪ್ರವಾಸಿಗರು ಆಂಧ್ರದಿಂದ ರೈಲಿನ ಮೂಲಕ ಕಡೂರಿಗೆ ಬಂದಿಳಿದಿದ್ದರು. ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ ಬೆಟ್ಟಕ್ಕೆ ಹೋಗುವುದು ಅವರ ಗಮ್ಯವಾಗಿತ್ತು. ನೀವು ಹೋಗಬೇಕಿರುವುದು ಚಿಕ್ಕಮಗಳೂರಿಗೆ, ಅಲ್ಲಿಗೇ ಬಿಡುವುದಾಗಿ ಹೇಳಿ ಬಸ್ ಹತ್ತಿಸಿಕೊಂಡಿದ್ದಾನೆ ಕಂಡಕ್ಟರ್. ಆದರೆ ಚಿಕ್ಕಮಗಳೂರು ಬದಲು ಮಂಗಳೂರಿಗೆ ಟಿಕೆಟ್ ನೀಡಿ ಪ್ರವಾಸಿಗರಿಗೆ ನೇರ ವಂಚನೆ ಎಸಗಿದ್ದಾನೆ.
ಒಂದು ಟಿಕೆಟ್ ಗೆ 202 ರಂತೆ 3,636 ರೂಪಾಯಿಯ ಟಿಕೆಟ್ ನೀಡಿಬಿಟ್ಟಿದ್ದಾನೆ ಕಂಡಕ್ಟರ್. ಜೊತೆಗೆ ಕಿಲಾಡಿ ಕಂಡಕ್ಟರ್ ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಆ ಹದಿನೆಂಟೂ ಮಂದಿ ಇಳಿಯುತ್ತಿದ್ದಂತೆ ದಡಾಬಢಾ ಅಂತಾ ಅವರ ಬಳಿಗೆ ತೆರಳಿ ನಯವಾದ ಮಾತಿನಲ್ಲಿ ಅವರಿಂದ ಟಿಕೆಟ್ ವಾಪಸ್ ಕೇಳಿದ್ದಾನೆ. ಕಡೂರಿನಿಂದ 40 ಕಿ.ಮೀ. ದೂರದ ಚಿಕ್ಕಮಗಳೂರಿಗೆ 202 ರೂಪಾಯಿ ಯಾಕೆ? ಎಂದು ಪ್ರವಾಸಿಗರು ಆಗ ಪ್ರಶ್ನೆ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಡಿಪೋಗೆ ಸೇರಿದ ಸದರಿ KSRTC ಬಸ್ ಕಡೂರಿನಿಂದ ಮಂಗಳೂರಿಗೆ ತೆರಳುತ್ತಿತ್ತು. ಈ ಪ್ರವಾಸಿಗರು ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ ಬೆಟ್ಟಕ್ಕೆ ಹೋಗುವ ಬಗ್ಗೆ ಬಸ್ಸಿನ ಮಾಹಿತಿ ಕೇಳಿದ್ದರು. ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ಬಿಡುವುದಾಗಿ ಬಸ್ ಹತ್ತಿಸಿಕೊಂಡಿದ್ದ ಕಂಡಕ್ಟರ್. ರಾತ್ರಿ ಪ್ರಯಾಣಿಸುವ ಹೊರ ರಾಜ್ಯದ ಪ್ರವಾಸಿಗರಿಗೆ ನಿರಂತರವಾಗಿ ಇಂತಹ ವಂಚನೆಗಳು ಮಾಡುತ್ತಿರುವ ಆರೋಪ ಸದಾ ಕೇಳಿಬರುತ್ತಿದೆ.