ಮಂಗಳೂರು: ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್ ಗಿರಿಪುನರಾವರ್ತನೆ ಹಿನ್ನೆಲೆ ನೈತಿಕ ಪೊಲೀಸ್ ಗಿರಿ ಕೇಸ್ ಆರೋಪಿಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಅಪರಾಧ ಕೃತ್ಯ ಮರುಕಳಿಸದಂತೆ ಆರೋಪಿಗಳಿಂದ ಜಾಮೀನು ಮುಚ್ಚಳಿಕೆ ಪಡೆಯಲಾಗುತ್ತಿದೆ. ಐದು ವರ್ಷಗಳಲ್ಲಿ ಈ ರೀತಿಯ ಘಟನೆಗಳಲ್ಲಿ ಭಾಗಿಯಾದವರನ್ನು ಗುರುತಿಸಿ ಸಿಆರ್‌ಪಿಸಿ ಸೆಕ್ಷನ್ 107 ಮತ್ತು 110ರ ಅಡಿಯಲ್ಲಿ ಜಾಮೀನು ಮುಚ್ಚಳಿಕೆ ಪಡೆಯಲಾಗಿದೆ. ಸೋಮೇಶ್ವರದಲ್ಲಿ ನಡೆದ ನೈತಿಕ ಪೊಲೀಸ್‌ಗಿರಿ ಘಟನೆಯ ಹಿನ್ನೆಲೆಯಲ್ಲಿ ಶನಿವಾರ ಪತ್ರಕರ್ತರು ಆಯುಕ್ತರನ್ನು ಪ್ರಶ್ನಿಸಿದಾಗ, ಮುಂಜಾಗರೂಕತ ಕ್ರಮವಾಗಿ ಸಿಆರ್‌ಪಿಸಿ ಸೆಕ್ಷನ್ 107 ಮತ್ತು 110ರ ಅಡಿಯಲ್ಲಿ ಜಾಮೀನು ಮುಚ್ಚಳಿಕೆ ಪಡೆದುಕೊಳ್ಳಲಾಗುವುದು. ಇದುವರೆಗೆ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ವಿವಿಧ ರೀತಿಯ ಕಾನೂನುಬಾಹಿರ ಕೃತ್ಯಗಳಲ್ಲಿ ಈ ಹಿಂದೆ ಪಾಲ್ಗೊಂಡಿದ್ದ 1,200 ಮಂದಿಯಿಂದ ಜಾಮೀನು ಮುಚ್ಚಳಿಕೆ ಪಡೆದುಕೊಳ್ಳಲಾಗಿದೆ. ಮುಚ್ಚಳಿಕೆ ಅವಧಿ ಒಂದು ವರ್ಷ ಅವಧಿ ಹೊಂದಿರುತ್ತದೆ. ಅಗತ್ಯ ಬಿದ್ದರೆ ಮತ್ತೆ ಅದನ್ನು ವಿಸ್ತರಿಸಲಾಗುವುದು. ಮುಚ್ಚಳಿಕೆ ನಿಯಮ ಉಲ್ಲಂಘಿಸಿದರೆ ಜಾಮೀನು ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ಮತ್ತೂಂದು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುವುದು. ಕಳೆದ ವರ್ಷ ಜಾಮೀನು ಮುಚ್ಚಳಿಕೆ ಷರತ್ತುಗಳನ್ನು ಉಲ್ಲಂಘಿಸಿದ 9 ಮಂದಿಯ 1.90 ಲ.ರೂ. ಬಾಂಡ್ ಮೊತ್ತವನ್ನು ಸರಕಾರದ ಖಜಾನೆಗೆ ಒಪ್ಪಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.