ಹಿಂದೆಯೂ ಜನರ ಮೇಲೆ ಹೊರೆ ಹಾಕಿದ್ದ ಕಾಂಗ್ರೆಸ್: ವಿದ್ಯುತ್ ದರ ಹೆಚ್ಚಳಕ್ಕೆ ಮಾಜಿ ಸಿಎಂ ಬೊಮ್ಮಾಯಿ ಗರಂ

ಬೆಳಗಾವಿ: ಒಂದು ಕಡೆ ಷರತ್ತು ವಿಧಿಸಿ 200 ಯುನಿಟ್ ವಿದ್ಯುತ್ ಉಚಿತ, ಇನ್ನೊಂದೆಡೆ ವಿದ್ಯುತ್ ದರ ಏರಿಕೆ ಒಟ್ಟಾರೆಯಾಗಿ ವಿದ್ಯುತ್ ವಿಚಾರದಲ್ಲಿ ಜನರ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚಿದ ರಾಜ್ಯ ಕಾಂಗ್ರೆಸ್  ಸರ್ಕಾರದ ವಿರುದ್ಧ ಮಾಜಿ ಸಿಎಂ  ಆಕ್ರೋಶ ಹೊರಹಾಕಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಈ ಹಿಂದೆಯೂ ಕಾಂಗ್ರೆಸ್​ನವರು ಹೆಸ್ಕಾಂ ಮೇಲೆ ದೊಡ್ಡ ಹೊರೆ ಹಾಕಿದ್ದರು. ಒಟ್ಟು ಬಿಲ್​​ನಲ್ಲಿ 50 ಪರ್ಸೆಮಟ್​​​ ಬಿಲ್ ಸರ್ಕಾರದಿಂದ ಬರುತ್ತದೆ. ಹಳೇ ಬಾಕಿ ಅಂತಾ ಪುಕ್ಕಟೆ ಹೊರಯನ್ನು ಜನರ ಮೇಲೆ ಹಾಕಿದ್ದರು ಎಂದರು.

200 ಯುನಿಟ್ ವರೆಗೆ ವಿದ್ಯುತ್ ಉಚಿತ ಅಂತ ಭರವಸೆಕೊಟ್ಟು ಅಧಿಕಾರಕ್ಕೇರಿದ ನಂತರ ಷರತ್ತುಗಳನ್ನು ವಿಧಿಸಿದ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿದ ಬೊಮ್ಮಾಯಿ, ಕಾಂಗ್ರೆಸ್​ನವರು ರಾಜ್ಯದ ಜನರನ್ನು ಸಂಕಷ್ಟದಲ್ಲಿ ಸಿಲುಕಿಸುತ್ತಿದ್ದಾರೆ. ಎಷ್ಟು ವಿದ್ಯುತ್ ಬಳಕೆ ಮಾಡಬೇಕೆಂಬ ಅಧಿಕಾರ ಪ್ರತಿ ಪ್ರಜೆಗಿದೆ. ಇವರು ಸರಾಸರಿ ಲೆಕ್ಕದಲ್ಲಿ ಗ್ರಾಹಕರು ಬಳಸುವ ವಿದ್ಯುತ್ ಮೇಲೂ ಹಿಡಿತ ಸಾಧಿಸುತ್ತಿದ್ದಾರೆ ಎಂದು ಹೇಳಿದರು.

ನಾನು ಸಿಎಂ ಆಗಿದ್ದಾಗ ದೊಡ್ಡ ಪ್ರಮಾಣದ ಅನುದಾನ ನೀಡಿದ್ದೆ. 13 ಸಾವಿರ ಕೋಟಿ ರೂಪಾಯಿ ನೀಡಿ ಅದಕ್ಕೆ ಪುನಶ್ಚೇತನ ನೀಡಿದ್ದೆವು. ಕಾಂಗ್ರೆಸ್ ಪಕ್ಷಕ್ಕೆ ಇದು ಗೊತ್ತಿಲ್ಲಾ ಅಂತೇನಿಲ್ಲಾ‌‌ ಎಂದು ಹೇಳಿದ ಬೊಮ್ಮಾಯಿ, ಇದು ಜನರಿಗೆ ಮಾಡಿರುವ ಒಂದು ದೋಖಾ. ಕಾಂಗ್ರೆಸ್ ಸರ್ಕಾರ ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವುದನ್ನ ಮಾಡುತ್ತಿದೆ ಎಂದರು.