ನಾಲ್ಕೈದು‌ ಜನರ ಜೀವಕ್ಕೆ ಕುತ್ತು ತಂದ ನಿಷೇಧಿತ ಗಾಳಿಪಟ ಮಾಂಜಾ ದಾರ

ಗದಗ: ಗಾಳಿಪಟ ಹಾರಿಸಲು ಬಳಕೆ ಮಾಡುವ “ಮಾಂಜಾ” ದಾರ ನಿಷೇಧ ಕಾಗದದಲ್ಲಷ್ಟೇ ಉಳಿದಿದೆ. ಅಪಾಯಕಾರಿ ಮಾಂಜಾ ದಾರ ಮಾರಾಟ, ಬಳಕೆ ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದು, ಫ್ಯಾನ್ಸಿ ಸ್ಟೋರ್‌ಗಳು, ಸಣ್ಣಪುಟ್ಟ ಅಂಗಡಿಗಳಲ್ಲಿ ಈ ದಾರವು ಸುಲಭವಾಗಿ ಸಿಗುತ್ತಿದೆ. ಇವುಗಳು ಪ್ರಾಣಿ-ಪಕ್ಷಿಗಳು ಮಾತ್ರವಲ್ಲದೆ ಮನುಷ್ಯರ ಪ್ರಾಣಕ್ಕೂ ಕಂಟಕವಾಗಿವೆ. ಗದಗ-ಬೆಟಗೇರಿ ಅವಳಿ ನಗರದ ರಸ್ತೆಯಲ್ಲಿ ಹರಿತವಾದ ಗಾಳಿಪಟ ದಾರದಿಂದ ಬೈಕ್ ಸವಾರರ ಕತ್ತು, ಕಾಲು, ಕೈಗೆ ಗಾಯವಾಗಿದೆ. ನಿನ್ನೆ (ಜೂ.05) ಕಾರಹುಣ್ಣಿಮೆ ಒಂದೇ ದಿನ ಓರ್ವ ರೈಲ್ವೇ ಪೊಲೀಸ್ ಸೇರಿ ನಾಲ್ಕೈದು‌ ಜನರಿಗೆ ಗಾಯವಾಗಿದೆ.
ಇನ್ನು ಬ್ಯಾನ್ ಆದ ಮಾಂಜಾ ದಾರದಿಂದ ಗಾಳಿಪಟ ಹಾರಾಟ ಮಾಡಲಾಗುತ್ತಿದೆ. ಇದರಿಂದ ಪಕ್ಷಿಗಳಿಗೆ ಮತ್ತು ಮನುಷ್ಯರ ಜೀವಕ್ಕೆ ಕುತ್ತು ಇದೆ. ಇದನ್ನು ಮಾರಾಟ ಮತ್ತು ಬಳಕೆ ಮಾಡದಂತೆ ತಡೆಗಟ್ಟಬೇಕೆಂದು ಸಂಘಟನೆಗಳು 15 ದಿನಗಳ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೂ ಕೂಡ ಜಿಲ್ಲಾಡಳಿತ ಡೋಂಟ್ ಕೇರ್ ಎಂದಿದೆ.

ನಿಷೇಧ ಆದೇಶ ಹೊರಡಿಸಿದ್ದ ಸರ್ಕಾರ
ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ತೀರ್ಪಿನಂತೆ ರಾಜ್ಯ ಸರಕಾರ 2017ರಲ್ಲಿ ಮಾಂಜಾ ದಾರದ ತಯಾರಿಕೆ, ಬಳಕೆ, ಮಾರಾಟವನ್ನು ನಿಷೇಧಿಸಿ ಗೆಜೆಟ್‌ ಅಧಿಸೂಚನೆ ಹೊರಡಿಸಿತ್ತು. ಆದರೆ, ಇದು ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ ಎಂದು ಸಾವರ್ಜನಿಕರು ಆರೋಪ ಮಾಡಿದ್ದಾರೆ.