ಸಚಿವ ಸ್ಥಾನ ಸಿಗದಿದ್ದಕ್ಕೆ ಪಕ್ಷದ ವಿರುದ್ಧ ಶಾಸಕ ವಿನಯ್ ಕುಲಕರ್ಣಿ ಅಸಮಾಧಾನ

ಬೆಳಗಾವಿ: ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ವಿನಯ್ ಕುಲಕರ್ಣಿ ಸ್ವಪಕ್ಷದ ವಿರುದ್ಧವೇ ಅಸಮಾಧಾನ ಹೊರ ಹಾಕಿದ್ದಾರೆ. ಈ ಬಾರಿ ನಮ್ಮ ಸಮುದಾಯದ 37 ಶಾಸಕರು ಆಯ್ಕೆಯಾಗಿದ್ದಾರೆ. ಸಮಾಜ ಮುಂದಿನ ದಿನಗಳಲ್ಲಿ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತೆ. ಲೋಕಸಭೆ ಚುನಾವಣೆ ಮೇಲೆ ಇದು ಶೇ 100 ರಷ್ಟು ಪರಿಣಾಮ ಬೀರುತ್ತೆ. ಲಿಂಗಾಯತ ಮತದಾರರು ಕಾಂಗ್ರೆಸ್ ಪರ ಒಲವು ತೋರಿದ್ದಾರೆ. ಮೊದಲು ಮಾಡಿದ ತಪ್ಪನ್ನೇ ಮತ್ತೆ ಮಾಡಬಾರದು. ಕೊಟ್ಟವರಿಗೆ ಸಚಿವ ಸ್ಥಾನ ಕೊಡದೆ ಹೊಸಬರಿಗೆ ಅವಕಾಶ ಕೊಡಿ. ಹೊಸ ನಾಯಕರು ಸಿದ್ಧರಾಗಬೇಕಲ್ವಾ ಎಂದು ಧಾರವಾಡ ಕ್ಷೇತ್ರದ ಕಾಂಗ್ರೆಸ್​ ಶಾಸಕ ವಿನಯ ಕುಲಕರ್ಣಿ ಎಚ್ಚರಿಕೆ ಕೊಟ್ಟಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹೊಸಬರಿಗೆ ಸಚಿವ ಸ್ಥಾನ ಕೊಡಿ ಅಂತ ಮನವಿ ಮಾಡುತ್ತಿದ್ದೇವೆ. ಹೆಚ್ಚಿನ ಸ್ಥಾನ ಪಡೆದು ಸರ್ಕಾರ ಬಂದಿದೆ. ಸಮಾಧಾನ ಮಾಡಲು ಏನೇನೋ ಮಾಡಲು ಹೋಗಿ ಈ ತರಹ ಆಗಿದೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕೆ ಸಿಗುತ್ತೆ. ಈ ಸಲ ನಮ್ಮ ಸಮಾಜದ 37 ಜನ ಶಾಸಕರು ಆಯ್ಕೆಯಾಗಿದ್ದಾರೆ. ಯಾರು ಸಮಾಜಕ್ಕಾಗಿ ಹೋರಾಟ ಮಾಡಿ ಕೆಲಸ ಮಾಡಿದ್ದಾರೆಂದು ಪಕ್ಷ ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ ಪಕ್ಷ ಇದನ್ನು ಅರ್ಥ ಮಾಡಿಕೊಂಡಿಲ್ಲ. ಸಮಾಜ ಸಹ ಮುಂದಿನ ದಿನಗಳಲ್ಲಿ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತೆ ಎಂದರು

ಯಾವುದೋ ಒತ್ತಡಕ್ಕೆ ಮಣಿದು ಈ ರೀತಿ ಮಾಡಲಾಗಿದೆ

ಯಾವುದೋ ಒತ್ತಡಕ್ಕೆ ಮಣಿದು ಈ ರೀತಿ ಮಾಡಲಾಗಿದೆ. ಖಾತೆ ಹಂಚಿಕೆಯಲ್ಲಿಯೂ ಲಿಂಗಾಯತರಿಗೆ ಅನ್ಯಾಯ ಆಗಿದೆ ಎನ್ನುವುದು ಎದ್ದು ಕಾಣುತ್ತದೆ. 37 ಜನರಲ್ಲಿ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ಸಿಕ್ಕಿದೆ. ಇನ್ನೂ ಇಬ್ಬರು, ಮೂರು ಜನರಿಗೆ ಸಚಿವ ಸ್ಥಾನ ಕೇಳಿದ್ವಿ. ಸಮಾಜ ಕಟ್ಟುವ ಕೆಲಸ ಮಾಡಿ ನಮ್ಮ ಸಮಾಜದ ಮತ ಕಾಂಗ್ರೆಸ್​ಗೆ ಬರುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ. ನಮ್ಮ ಸಮಾಜದ ಮತ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ಗೆ ಹೋಗಿದೆ ಎಂದು ತಿಳಿಸಿದರು.

ಮೊದಲು ಮಾಡಿದ ತಪ್ಪನ್ನೇ ಪಕ್ಷ ಮತ್ತೆ ಮಾಡಬಾರದು

135 ಕಾಂಗ್ರೆಸ್ ಶಾಸಕರು ಆಯ್ಕೆಯಾಗೋದು ಇಟ್ಸ್ ನಾಟ್ ಅ ಜೋಕ್. ಪಕ್ಷದ ಮುಖಂಡರಿಗೂ ನಾವು ಹೇಳುತ್ತೇವೆ, ನಿಮ್ಮ ಮೂಲಕ ಪಕ್ಷಕ್ಕೆ ನಾನು ವಿನಂತಿ ಮಾಡುತ್ತೇನೆ. ಸಮಾಜಕ್ಕೆ ಒತ್ತು ಕೊಡದಿದ್ದರೇ ಇಷ್ಟು ವರ್ಷ ಪಕ್ಷದ ಪರಿಸ್ಥಿತಿ ಏನಾಗಿತ್ತು ಅರ್ಥ ಮಾಡಿಕೊಳ್ಳಬೇಕು. ವೀರೇಂದ್ರ ಪಾಟೀಲ್ ನಂತರ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಗೆದ್ದಿದೆ. ಮೊದಲು ಮಾಡಿದ ತಪ್ಪನ್ನೇ ಪಕ್ಷ ಮತ್ತೆ ಮಾಡಬಾರದು ಅಂತ ವಿನಂತಿ ಮಾಡುವೆ. ಬರುವ ಸಂದರ್ಭದಲ್ಲಿ ಇವರನ್ನು ಬಿಟ್ಟು ಹೊಸಬರಿಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿಕೊಂಡರು.

ಕಾಂಗ್ರೆಸ್​ ಗ್ಯಾರಂಟಿ ಬಗ್ಗೆ ಬಿಜೆಪಿ ನಾಯಕರ ಟೀಕೆ ವಿಚಾರವಾಗಿ ಮಾತನಾಡಿದ ಅವರು ಕೈಲಾಗದವರು ಮೈಪರಚಿಕೊಂಡಂತಾಗಿದೆ ಬಿಜೆಪಿಯವರ ಸ್ಥಿತಿ. ಚುನಾವಣೆ ವೇಳೆ ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ. ಗ್ಯಾರಂಟಿ ಯೋಜನೆಗೆ ಷರತ್ತು ಹಾಕಲೇಬೇಕಾಗುತ್ತದೆ. ಸಣ್ಣಪುಟ್ಟ ಮನೆಗಳಲ್ಲಿ 200 ಯೂನಿಟ್ ವಿದ್ಯುತ್ ಬಳಕೆ ಮಾಡಲ್ಲ. ಸರಾಸರಿ ವಿದ್ಯುತ್​ ಬಳಕೆ ಜೊತೆಗೆ ಶೇ10 ರಷ್ಟು ಸೇರಿಸಿ ಉಚಿತ ನೀಡುತ್ತಿದ್ದೇವೆ ಎಂದರು.

ಧಾರವಾಡ ಪ್ರವೇಶ ಕೋರಿ ಮತ್ತೆ ಕೋರ್ಟ್​ಗೆ ಅರ್ಜಿ ಸಲ್ಲಿಸುತ್ತೇನೆ. ಈಗಲಾದರೂ ಪ್ರವೇಶಕ್ಕೆ ಅನುಮತಿ ಕೊಡುತ್ತಾರೆ ಎಂದು ಭರವಸೆ ಇದೆ. ನನ್ನ ಮೇಲೆ ಭರವಸೆ ಇಟ್ಟು ಜನ ಗೆಲ್ಲಿಸಿದ್ದಾರೆ. ಐದು ವರ್ಷಗಳಿಂದ ನನ್ನ ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ರಾಜಕೀಯವಾಗಿ ನಮ್ಮನ್ನು ಬೆಂಬಲಿಸಿದವರಿಗೆ ಅನ್ಯಾಯ ಆಗಿದೆ. ನನ್ನ ಕ್ಷೇತ್ರದಲ್ಲಿ ಮಳೆಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಸರ್ವೆ ಮಾಡಿಸಿ ಸಂತ್ರಸ್ತರಿಗೆ ಪರಿಹಾರ ಕೊಡುವ ಕೆಲಸ ಮಾಡುವೆ ಎಂದು ಹೇಳಿದರು.