ಕಾಂಗ್ರೆಸ್ ಗ್ಯಾರಂಟಿಗಳು ಜನರನ್ನು ಭಿಕ್ಷಾಟನೆಯ ಕೂಪಕ್ಕೆ ತಳ್ಳುತ್ತಿದೆ: ನಾರಾಯಣಸ್ವಾಮಿ


ಚಿತ್ರದುರ್ಗ: ಜನರನ್ನು ಭಿಕ್ಷಾಟನೆ ಕೂಪಕ್ಕೆ ತಳ್ಳುವ ವ್ಯವಸ್ಥೆಯನ್ನು ಕಾಂಗ್ರೆಸ್ (Congress) ಮಾಡಿದೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ (A Narayanaswamy) ಹೇಳಿದ್ದಾರೆ.

ಚಿತ್ರದುರ್ಗದ (Chitradurga) ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ನಡೆದ ಮೆಡಿಕಲ್ ಕಾಲೇಜು ಅನುಷ್ಠಾನ ಕುರಿತ ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿ (Guarantee) ಯೋಜನೆಗಳ ಬಗ್ಗೆ ಟೀಕಿಸಿದರು. ಜನರನ್ನು ಭಿಕ್ಷಾಟನೆ ಸರದಿಯಲ್ಲಿ ನಿಲ್ಲಿಸಿ ಕಾಂಗ್ರೆಸ್ ಅಧಿಕಾರ ಪಡೆಯುವ ಷಡ್ಯಂತ್ರ ನಡೆಸಿದೆ. ಅಲ್ಲದೇ ಸ್ವತಂತ್ರ‍್ಯ ಹೋರಾಟಗಾರರ ಭವಿಷ್ಯದ ಭಾರತದ ಕನಸನ್ನು ಕೈ ನಾಯಕರು ನುಚ್ಚುನೂರು ಮಾಡುವ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸಿದ್ಧಾಂತ ಗಾಳಿಗೆ ತೂರಿ ಮತದಾರರಿಗೆ ಆಮಿಷ ಒಡ್ಡಿ ಪ್ರಜಾಪ್ರಭುತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ನಾವು ಸಿದ್ಧಾಂತದಿಂದ ಗೆದ್ದಿದ್ದೇವೆ ಎಂದು ಹೇಳುವ ಎದೆಗಾರಿಕೆ ಕಾಂಗ್ರೆಸ್ ನಾಯಕರಿಗಿಲ್ಲ. ಗ್ಯಾರಂಟಿ ಕಾರ್ಡ್ ಮೂಲಕ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ರಾಜ್ಯದ ಸರ್ವತೋಮುಖ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಕಳೆದ 15 ದಿನಗಳಿಂದ ಗ್ಯಾರಂಟಿ ಕಾರ್ಡ್ಗಳ ಬಗ್ಗೆ ಚರ್ಚೆ ನಡೆಸುವುದೇ ಅವರ ಕೆಲಸವಾಗಿದೆ ಎಂದು ಕಿಡಿಕಾರಿದರು.
ಬಿಜೆಪಿಯಿಂದ ಪ್ರತಿ ವ್ಯಕ್ತಿಯ ಅಕೌಂಟ್‌ಗೆ 15 ಲಕ್ಷ ರೂ. ನೀಡುವ ಭರವಸೆ ವಿಚಾರವಾಗಿ ಕೈ ನಾಯಕರು ಹೇಳುತ್ತಿದ್ದು, ಅದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ಸಿದ್ದರಾಮಯ್ಯ ಹಾಗೂ ಡಿಕೆಶಿ ನೀಡಿರುವ ‘ಗ್ಯಾರಂಟಿ’ ಹೇಳಿಕೆಗಳು ಎಲ್ಲರ ಬಳಿ ಇವೆ. ಒಂದು ವೇಳೆ 15 ಲಕ್ಷ ಖಾತೆಗೆ ಹಾಕುವ ಬಗ್ಗೆ ಮೋದಿ ಹೇಳಿಕೆ ನೀಡಿದ್ದರೆ ಸಾಕ್ಷಿ ನೀಡಿ. ಅದಕ್ಕೆ ನಾನೇ ಕ್ಷಮೆ ಕೇಳುತ್ತೇನೆ. ಒಂದು ವೇಳೆ ಸಾಕ್ಷ್ಯಾಧಾರಗಳಿದ್ದಲ್ಲಿ ನಾನೇ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಸಚಿವ ನಾರಾಯಣ ಸ್ವಾಮಿ ಸವಾಲು ಹಾಕಿದರು.
ರಾಜ್ಯಾದ್ಯಂತ ಮಳೆಯಿಂದ ಭಾರೀ ಅನಾಹುತ ಸಂಭವಿಸಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಸಹ ಸಾರ್ವಜನಿಕವಾಗಿ ಜನರು ಅವಾಂತರಗಳನ್ನು ಅನುಭವಿಸಿದ್ದಾರೆ. ಆದರೆ ರಾಜ್ಯದ ಸಚಿವರಿಗೆ ಪ್ರಕೃತಿ ವಿಕೋಪದ ಬಗ್ಗೆ ಗಮನಹರಿಸಲು ಸಮಯವಿಲ್ಲ. ಕೇವಲ ಗ್ಯಾರಂಟಿ ಕಾರ್ಡ್ಗಾಗಿ 5 ವರ್ಷದ ಸರ್ಕಾರ ಎಂಬ ಚಿಂತನೆ ನಡೆಯುತ್ತಿದೆ ಎಂದು ಟೀಕಿಸಿದರು.