ಜಗದೀಶ್ ಶೆಟ್ಟರ್ ಭೇಟಿಯಾಗಲು ಹೊರಟ ಡಿಕೆ ಶಿವಕುಮಾರ್, ಮಾಜಿ ಸಿಎಂಗೆ ಉನ್ನತ ಹುದ್ದೆ ನೀಡುವ ಬಗ್ಗೆ ಹೇಳಿದ್ದಿಷ್ಟು

ಬೆಳಗಾವಿ: ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾಗಿ ವಿಧಾನಸಭೆ ಚುನಾವಣೆ ಸ್ಪರ್ಧಿಸಿ ಸೋತಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್‌ ಅವರಿಗೆ ಉನ್ನತ ಸ್ಥಾನಮಾನ ನೀಡುವ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತುಕತೆ ನಡೆಸಲಿದ್ದಾರೆ. ಹುಬ್ಬಳ್ಳಿಯಲ್ಲಿರುವ ಜಗದೀಶ್ ಶೆಟ್ಟರ್ ನಿವಾಸಕ್ಕೆ ಇಂದು(ಮೇ 31) ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ. ಅದಕ್ಕೂ ಮುನ್ನ ಬೆಳಗಾವಿಯಲ್ಲಿ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಚುನಾವಣೆಯಲ್ಲಿ ಬ್ಯುಸಿ ಇದ್ದೆ. ಪಕ್ಷಕ್ಕೆ ಶಕ್ತಿ ಕೊಟ್ಟ ಅನೇಕ ನಾಯಕರಿದ್ದಾರೆ ಭೇಟಿಯಾಗಬೇಕಿತ್ತು. ನನಗೆ ಟೈಮ್ ಸಿಕ್ಕಿರಲಿಲ್ಲ, ಸರ್ಕಾರ ರಚನೆ, ಕ್ಯಾಬಿನೆಟ್ ರಚನೆ, ಶಾಸಕಾಂಗ ಸಭೆ, ಗ್ಯಾರಂಟಿಗಳು, ಇಲಾಖಾವಾರು ಪರಿಶೀಲನೆ ಕೆಲಸ ಆಗಬೇಕಿತ್ತು. ಇದರ ಮಧ್ಯದಲ್ಲಿ ಟೈಮ್ ಮಾಡಿಕೊಂಡು ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಭೇಟಿ ಆಗಲು ಬಂದಿದ್ದೇನೆ ಎಂದರು.


ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಪತಿಕ್ರಿಯಿಸಿದ ಡಿಕೆ ಶಿವಕುಮಾರ್, ರಾಜಕಾರಣದಲ್ಲಿ ಹೇಗೆ ಮಾಡಬೇಕು ಎಂದು ನಮಗೆ ಗೊತ್ತಿದೆ. ಯಾವ ಸಮಯದಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ. ನಾವು ಅವರ ಜೊತೆಗೆ ಇದ್ದೇವೆ, ಇಡೀ ಪಕ್ಷ ಅವರ ಜೊತೆಗೆ ಇದೆ. ನಿಮ್ಮ ಮಾತು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇದ್ದಾರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಯಾವುದೇ ಕಂಡೀಷನ್ ಏನೂ ಇಲ್ಲಾರೀ. ಯಾರೂ ಒಪ್ಪಿಕೊಳ್ಳುವುದು ಬಿಡುವುದು ಇಲ್ಲ, ಅವರು ನಮ್ಮ ಪಕ್ಷದ ನಾಯಕರು. ಬಾರ್ಗೇನಿಂಗ್ ಮಾಡುವಂತದ್ದು ಏನೂ ಇಲ್ಲ. ಯಾರು ನಮ್ಮ ಜೊತೆ ಧೈರ್ಯ ಮಾಡಿ ಕೈ ಜೋಡಿಸಿದ್ದಾರೆ ಅವರನ್ನು ಕೈ ಬಿಡುವ ಪ್ರಶ್ನೆ ಬರಲ್ಲ ಎಂದು ಹೇಳಿದರು.
ಲೋಕಸಭೆ ಚುನಾವಣೆ ಟಾರ್ಗೆಟ್ ಮಾಡಿ ಇಬ್ಬರೂ ನಾಯಕರ ಬಳಕೆ ಮಾಡುತ್ತಿರಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಅವರು ನಮ್ಮ ಪಕ್ಷದ ನಾಯಕರು. ಅವರು ನಮ್ಮ ಪಕ್ಷದ ಕಾರ್ಯಕರ್ತರಲ್ಲ. ಗೆದ್ದಿರಬಹುದು, ಸೋತಿರಬಹುದು ಅವರು ನಮ್ಮ ನಾಯಕರು ಎಂದು ತಿಳಿಸಿದರು.
ತುಮಕೂರು ಗುಬ್ಬಿ ವಾಸು, ಶಿವಲಿಂಗೇಗೌಡ, ಪುಟ್ಟಣ್ಣಯ್ಯ, ಬಾಬುರಾವ್ ಚಿಂಚನಸೂರ್ ಇವರೆಲ್ಲ ಇರುವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷಕ್ಕೆ ಸೇರಿದ್ರು. ನಮ್ಮ ಪಕ್ಷಕ್ಕೆ ಇವರೆಲ್ಲರೂ ಶಕ್ತಿ ತುಂಬಿದ್ದು, ನಾವು ಅವರ ಶಕ್ತಿ ತುಂಬಬೇಕಾದದ್ದು ನಮ್ಮ ಕರ್ತವ್ಯ. ಹೀಗಾಗಿ ನಾನು ಪಕ್ಷದ ಆಂತರಿಕ ವಿಚಾರ ಚರ್ಚೆ ಸಲಹೆ ಪಡೆಯಲು ಭೇಟಿ ಮಾಡುತ್ತಿದ್ದೇನೆ. ಸೌಹಾರ್ದಯುತವಾಗಿ ಭೇಟಿ ಬಿಟ್ಟು ರಾಜಕೀಯ ವಿಶೇಷ ಏನು ಇಲ್ಲ ಎಂದು ಸ್ಪಷ್ಟಪಡಿಸಿದರು.
ಇಂದು ಮಧ್ಯಾಹ್ನ ಎಲ್ಲ ಮಂತ್ರಿಗಳು ಸೇರಿ ಸಭೆ ಮಾಡುತ್ತಿದ್ದೇವೆ. ನಾಳೆ(ಜೂನ್ 01) ರೆಗ್ಯುಲರ್ ಕ್ಯಾಬಿನೆಟ್ ಮೀಟಿಂಗ್ ಇದೆ. ನಾಳೆ ಮುಂಚಿತವಾಗಿ ಸಿಎಂ ಕೆಲವರನ್ನು ಆಹ್ವಾನಿಸಿದ್ದು, ಎಲ್ಲಾ ಇಲಾಖೆ ಮಂತ್ರಿಗಳು ಕೂಡ ಚರ್ಚೆ ಮಾಡಿದ್ದಾರೆ. ಪರಸ್ಪರ ಚರ್ಚೆ ಮಾಡಿ ಬಳಿಕ ನಾವು ನಿಮ್ಮ ಜೊತೆ ಮಾತನಾಡುತ್ತೇವೆ ಎಂದರು