ಬೆಂಗಳೂರು: ಕಳೆದ ಮೂರು ನಾಲ್ಕು ತಿಂಗಳಿಂದ ಸಂಬಳ ನೀಡದಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು (Asha workers) ಸಿಡಿದೆದ್ದಿದ್ದಾರೆ. ರಾಜ್ಯದಲ್ಲಿ ಒಟ್ಟು 42 ಸಾವಿರ ಆಶಾ ಕಾರ್ಯಕರ್ತೆಯರು ಇದ್ದಾರೆ. ಬಿರು ಬಿಸಲು, ಕೊರೆವ ಚಳಿಯಲ್ಲಿ ಮತ್ತು ಬೀಸೋ ಗಾಳಿಗೂ ಬಗ್ಗದೇ ದುಡಿಯುತ್ತಾರೆ. ಆದರೆ ಸುಮಾರು ಮೂರು ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ಆಶಾ ಕಾರ್ಯಕರ್ತೆಯರು ಪರದಾಡುವಂತಾಗಿದೆ. ರಾಜ್ಯ ಸರ್ಕಾರ ಕೊಡುವ ಗೌರವಧನ ಮತ್ತು ಕೇಂದ್ರ ಸರ್ಕಾರ ಕೊಡುವ ಪ್ರೋತ್ಸಾಹಧನ ಬದುಕಿಗೆ ಆಧಾರವಾಗಿದ್ದು, ಈಗ ಅದಕ್ಕೂ ಕೊಳ್ಳಿ ಇಡುತ್ತಿರುವುದು ಎಷ್ಟು ಸರಿ ಅಂತ ಪ್ರಶ್ನೆ ಮಾಡುತ್ತಿದ್ದಾರೆ.
ಸದ್ಯ ರಚನೆ ಆಗಿರುವ ನೂತನ ಸರ್ಕಾರ ಆದರೂ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ. ಪದೇ ಪದೇ ಮೀಟಿಂಗ್ ಮಾಡಿ ಟೊಳ್ಳು ಭರವಸೆ ಕೊಡುವ ಬದಲು ಹಣ ಬಿಡುಗಡೆ ಮಾಡಲು ಒತ್ತಾಯಿಸಿದ್ದಾರೆ. ಜೊತೆಗೆ ನೂತನ ಸರ್ಕಾರದ ಮುಂದೆ ಆಶಾ ಕಾರ್ಯಕರ್ತೆಯರು ಅಹವಾಲು ತೋಡಿಕೊಂಡಿದ್ದು, ಸಿಎಂ, ಡಿಸಿಎಂ ಗೆ ಮನವಿ ಮಾಡಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ., ಆಶಾ ಕಾರ್ಯಕರ್ತೆಯರಿಗೆ 8 ಸಾವಿರ ರೂಪಾಯಿ ಮತ್ತು ಬಿಸಿಯೂಟ ನೌಕರರಿಗೆ ಐದು ಸಾವಿರ ರೂಪಾಯಿ ವೇತನ ನೀಡುವುದಾಗಿ ಬೆಳಗಾವಿಯಲ್ಲಿ ಇತ್ತೀಚೆಗೆ ಕ್ರಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಘೋಷಿಸಿದ್ದರು. ಇದು ಕಾಂಗ್ರೆಸ್ 6ನೇ ಗ್ಯಾರಂಟಿ ಕೂಡ ಆಗಿದೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಲಿ 11,500ರೂ.ಗಳಿಂದ 15,000 ಸಾವಿರ ರೂ., ಸಹಾಯಕಿಯರಿಗೆ ಹಾಲಿ 7,500 ರೂ.ದಿಂದ 10,000 ಸಾವಿರ ರೂ., ಆಶಾ ಕಾರ್ಯಕರ್ತೆಯರಿಗೆ ಈಗ ಇರುವ 5,000 ರೂ.ಗಳಿಂದ 8,000 ರೂ. ಹಾಗೂ ಬಿಸಿಯೂಟ ಅಡುಗೆ ಕಾರ್ಯಕರ್ತೆಯರಿಗೆ ಹಾಲಿ 3,700 ರೂ.ದಿಂದ 5,000 ರೂ.ಗಳಿಗೆ ಗೌರವಧನ ಪರಿಷ್ಕರಣೆ ಮಾಡುವುದಾಗಿ ಘೋಷಿಸಿದ್ದರು.