ಎರಡು ಜೀವಗಳ ಬಲಿ ಬಳಿಕ ಎಚ್ಚೆತ್ತ ಬಿಬಿಎಂಪಿ; ಡೇಂಜರ್ ಅಂಡರ್ ಪಾಸ್​ಗಳಲ್ಲಿ ಮಹತ್ವದ ಕ್ರಮ

ಬೆಂಗಳೂರು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ರಣ ಮಳೆ ಸಿಲಿಕಾನ್ ಸಿಟಿಯಲ್ಲಿ ಭಾರೀ ಅವಾಂತರಗಳನ್ನು ಸೃಷ್ಟಿಸಿದೆ(Bengaluru Rain). ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಇನ್ನು 2 ಸಾವಿನ ಬಳಿಕ ಬುದ್ದಿ ಕಲಿತ ಬಿಬಿಎಂಪಿ(BBMP) IISC ತಜ್ಞರ ಮೊರೆ ಹೋಗಿದೆ. ಬಿಬಿಎಂಪಿಯ 18 ಅಂಡರ್​ ಪಾಸ್​ಗಳ ಕಾರ್ಯಕ್ಷಮತೆ ಬಗ್ಗೆ ವರದಿ ನೀಡಲು ತಜ್ಞರಿಗೆ ಸೂಚಿಸಿದೆ. ಹಾಗೂ ಅಂಡರ್‌ಪಾಸ್‌ಗಳಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.

ಬಿಬಿಎಂಪಿಯ 18 ಅಂಡರ್ ಪಾಸ್​ಗಳ ಪೈಕಿ 3 ಅಂಡರ್ ಪಾಸ್​ಗಳು ಡೇಂಜರ್ ಎಂಬುವುದು ತಿಳಿದುಬಂದಿದೆ. ಈ ಮೂರು ಅಂಡರ್ ಪಾಸ್​ಗಳು ಬಲಿಗಾಗಿ ಬಾಯ್ತೆರೆದು ಕಾಯುತ್ತಿವೆ. ಹೀಗಾಗಿ ಬಿಬಿಎಂಪಿ ಇಲಾಖೆ ಅಂಡರ್ ಪಾಸ್​ಗಳ ಅಧ್ಯಯನಕ್ಕೆ IISC ತಜ್ಞರ ಮೊರೆ ಹೋಗಿದೆ. ಬೆಂಗಳೂರಿನ ಅಂಡರ್ ಪಾಸ್​ಗಳ ಕಾರ್ಯ ಕ್ಷಮತೆ ಆಡಿಟ್​ಗೆ ಬಿಬಿಎಂಪಿ ಮುಂದಾಗಿದ್ದು ಪಾಲಿಕೆ ವ್ಯಾಪ್ತಿಯ 18 ಅಂಡರ್ ಪಾಸ್ ಗಳ ಕಾರ್ಯಕ್ಷಮತೆ ಕುರಿತು ವರದಿ ನೀಡುವಂತೆ IISC ತಜ್ಞರಿಗೆ ಮನವಿ ಮಾಡಲಾಗಿದೆ. ಈಗಾಗಲೇ 18 ಅಂಡರ್ ಪಾಸ್ ಗಳಲ್ಲಿ ಮೂರು ಅಂಡರ್ ಪಾಸ್ ಡೇಂಜರ್ ಅಂದು ತಜ್ಞರು ತಿಳಿಸಿದ್ದಾರೆ. ಕೆ.ಆರ್. ಸರ್ಕಲ್, ಕಾವೇರಿ ಜಂಕ್ಷನ್ ಮುಂಭಾಗ, ಗಾಲ್ಫ್ ಕೋರ್ಟ್ ರಸ್ತೆ (ಸಿಎಂ ಮನೆ ಸಂಪರ್ಕದ ಅಂಡರ್ ಪಾಸ್). ಬಿಬಿಎಂಪಿ IISC ತಜ್ಞರ ವರದಿ ಪಡೆದು ಸರ್ಕಾರಕ್ಕೆ ಸಲ್ಲಿಸಲಿದೆ.

ಅಂಡರ್‌ಪಾಸ್‌ಗಳಲ್ಲಿ ಬಿಬಿಎಂಪಿ ತೆಗೆದುಕೊಳ್ಳಲು ಮುಂದಾಗಿರುವ ಕ್ರಮಗಳು

  1. ಕೆಳಸೇತುವೆನು, ಕೆ.ಆರ್.ವೃತ್ತದ ಇಳುಜಾರು ಭಾಗ (Down Edge) ದಲ್ಲಿ ನಿರ್ಮಿಸಿರುವ 04 ರಸ್ತೆಗಳ ಮತ್ತು ಕೆ.ಆರ್.ವೃತ್ತದ ರಸ್ತೆ ಮೇಲೆ ಬೀಳುವ ಎಲ್ಲಾ ಮಳೆ ನೀರು ಕೆಳಸೇತುವೆಯ ಚರಂಡಿಗೆ ಆಗಮಿಸುತ್ತಿದ್ದು, ಸದರಿ ಚರಂಡಿಯ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತಿದ್ದು, ಮತ್ತು ಪ್ರಸ್ತುತ ಬೆಂಗಳೂರು ನಗರದಲ್ಲಿ ಕಡಿಮೆ ಅವಧಿಯಲ್ಲಿ ಅಧಿಕ ಮಳೆಯಾಗುತ್ತಿರುವ (ligh Intensity Low Duration Rainfall) ಹಿನ್ನಲೆಯಲ್ಲಿ ಎಲ್ಲಾ ಮಳೆ ನೀರು ಕೆಳಸೇತುವೆಗೆ ಹೋಗದಂತೆ ಕೆಳಸೇತುವೆಯ ಏರುವ ಮತ್ತು ಇಳಿಯುವ ರಾಂಪ್ ಮುಂಭಾಗದಲ್ಲಿ ಪ್ರತ್ಯೇಕ ಚರಂಡಿಯನ್ನು ನಿರ್ಮಿಸಿ ನೇರವಾಗಿ ರಾಜಕಾಲುವೆಗೆ ಸಂಪರ್ಕ ಕಲ್ಪಿಸಲು ಮುಂದಾಗಿದೆ.
  2. ರಸ್ತೆಯ ಮೇಲ್ಭಾಗದ ಮಳೆ ನೀರು ಕೆಳಸೇತುವೆಗೆ ಹೋಗದಂತೆ ರಾಂಪ್ ಮುಂಭಾಗದಲ್ಲಿ ಪ್ರತ್ಯೇಕವಾಗಿ ಚರಂಡಿಯನ್ನು ನಿರ್ಮಿಸುವ ಜೊತೆಗೆ ಒಂದು ರಸ್ತೆ ಉಬ್ಬರವನ್ನು ಸಹ ನಿರ್ಮಿಸಲು ಉದ್ದೇಶಿಸಲಾಗಿದೆ.
  3. ಕೆಳಸೇತುವೆಯ ಕೆಳಭಾಗದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಗಳನ್ನು ಅಳವಡಿಸುವುದರ ಜೊತೆಗೆ Vertical Clearance Gauge Beam ಅನ್ನು ಆಳವಡಿಸಿ ಅತೀ ಪ್ರವಾಹ ಉಂಟಾದ ತುರ್ತು ಸಂದರ್ಭಗಳಲ್ಲಿ ಒಂದು Boom Barrier ಅನ್ನು ಸಹ ನಿರ್ಮಿಸಿ ಕೆಳಸೇತುವೆಯ ವಾಹನ ನಿರ್ಬಂಧ ಪಡಿಸುವ ಕ್ರಮವನ್ನು ಸಂಚಾರ ಪೋಲಿಸ್ ಇಲಾಖೆಯ ಸಹಯೋಗದಿಂದ ನಿರ್ವಹಣೆ ಮಾಡಲು ಉದ್ದೇಶಿಸಲಾಗಿದೆ. ಇನ್ನು 15 ದಿನಗಳಲ್ಲಿ ಪೂರ್ಣಗೊಳಿಸಲು ಕ್ರಮವಹಿಸಲು ಉದ್ದೇಶಿಸಲಾಗಿದೆ