ಬೆಂಗಳೂರು ಗ್ರಾಮಾಂತರ: ಬಿರುಗಾಳಿಗೆ ನೆಲಕ್ಕಚ್ಚಿರುವ ಸಂಪಾಗಿ ಬೆಳೆದಿದ್ದ ಹೀರೆಗೀಡಗಳು. ಆಲಿಕಲ್ಲು ಮಳೆಗೆ ತೂತು ಬಿದ್ದಿರುವ ಹೂ ಕೋಸು ಹಾಗೂ ಹುರುಳಿಗಿಡಗಳು. ಭಾರಿ ಮಳೆಗೆ ಜೋಳ ಸೇರಿದಂತೆ ಹಲವು ಹೂ ಬೆಳೆಗಳು ನಾಶ. ಹೌದು ಮಳೆಯ ಅವಾಂತರಗಳಿಂದ ಬೆಳೆ ಹಾನಿಯಾಗಿರೋದು ಜಿಲ್ಲೆಯ ದೊಡ್ಡಬಳ್ಳಾಪುರ(Doddaballapura) ತಾಲೂಕಿನ ಕಸವನಹಳ್ಳಿ ಗ್ರಾಮದಲ್ಲಿ. ಅಂದಹಾಗೆ ಇಲ್ಲಿನ ಕಸವನಹಳ್ಳಿ, ಬಿಸವನಹಳ್ಳಿ ಗ್ರಾಮದಲ್ಲಿ ಹಲವು ರೈತರು ಮಿಶ್ರ ಬೆಳೆಗಳನ್ನ ಬೆಳೆಯುತ್ತಾರೆ. ಹತ್ತಾರು ಎಕರೆ ಪ್ರದೇಶದಲ್ಲಿ ಹೀರೆಗಿಡ, ಹುರುಳಿಗಿಡ, ಜೋಳ, ಹೂ ಕೋಸು, ಹೂ ಗಿಡಗಳನ್ನ ರೈತರು ಬೆಳೆದಿದ್ದಾರೆ. ಆದ್ರೆ, ಕಳೆದ ರಾತ್ರಿ ಬಿರುಗಾಳಿ ಸಹಿತ ಆಲಿ ಕಲ್ಲು ಮಳೆಗೆ, ಜೋಳ, ಕೋಸು, ಹುರುಳಿಕಾಯಿ, ಈರೆಕಾಯಿ, ಚೆಂಡು ಹೂ ಸೇರಿ ಹತ್ತಾರು ಎಕರೆ ಬೆಳೆ ಮಣ್ಣು ಪಾಲಾಗಿದೆ. ಕೈಗೆ ಬಂದ ಬೆಳೆ ಇನ್ನೇನು ಕೆಲವೇ ದಿನಗಳಲ್ಲಿ ಫಲ ನೀಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಂದಹಾಗೆ ನಿನ್ನೆ(ಮೇ.21) ರಾತ್ರಿ ಒಂದು ಗಂಟೆಗಳ ಕಾಲ ಸುರಿದ ಆಲಿಕಲ್ಲು ಮಳೆಯಿಂದಾಗಿ ಇನ್ನೆನು ಮಾರಾಟ ಮಾಡಬೇಕಿದ್ದ ಬೆಳೆಗಳು ಆಲಿಕಲ್ಲಿನಿಂದ ತೂತು ಬಿದ್ದು, ಬೆಳೆ ಸಂಪೂರ್ಣ ನಾಶವಾಗಿದೆ. ಜೊತೆಗೆ ಬಿರುಗಾಳಿಗೆ ಮಹಾಘನಿ ಮರಗಳು ಕೂಡ ನೆಲಕಚ್ಚಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ. ಇಷ್ಟೆಲ್ಲಾ ಬೆಳೆ ಹಾನಿಯಾಗಿದ್ದರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವ ಕೆಲಸ ಮಾಡಿಲ್ಲ. ಜೊತೆಗೆ ಬೆಳೆ ನಾಶವಾಗಿರುವ ರೈತರ ತೋಟಗಳಿಗೆ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದು ರೈತರ ನೆರವಿಗೆ ತೋಟಗಾರಿಕೆ ಅಧಿಕಾರಿಗಳು ಕೂಡ ಮುಂದಾಗದೇ ಇರುವುದು ಇಲ್ಲಿನ ರೈತರನ್ನ ಕೆರಳಿಸಿದೆ. ಕೈಗೆ ಬರಬೇಕಿದ್ದ ತುತ್ತು, ಬಾಯಿಗೆ ಬರಲಿಲ್ಲ ಎಂದು ರೈತರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. ಜೊತೆಗೆ ಬೆಳೆಹಾನಿಯಾಗಿರೋ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.
ಒಟ್ಟಾರೆ ಕಳೆದ ರಾತ್ರಿ ಬಿದ್ದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ದೊಡ್ಡಬಳ್ಳಾಪುರದ ಹಲವು ಹಳ್ಳಿಗಳ ರೈತರು ಬೆಳೆದ ಬೆಳೆಗಳು ನಾಶವಾಗಿ ಅನ್ನದಾತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬೆಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಬೆಳೆ ಕಳೆದುಕೊಂಡಿರೋ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಕೆಲಸ ಮಾಡಬೇಕಿದೆ.