ಕಾಂತಾರ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ. ಕಳೆದ ವರ್ಷ ಸೆಪ್ಟೆಂಬರ್ 30ರಂದು ರಿಲೀಸ್ ಆದ ಈ ಸಿನಿಮಾ ಯಾರೂ ನಿರೀಕ್ಷಿಸದ ಮಟ್ಟಿನಲ್ಲಿ ಕ್ರೇಜ್ ಹುಟ್ಟುಹಾಕಿತು. ಕಿಚ್ಚ ಸುದೀಪ್ ಅವರಿಂದ ಹಿಡಿದು ಗಣ್ಯಾತಿಗಣ್ಯರೆಲ್ಲ ಸಿನಿಮಾ ಮೆಚ್ಚಿ ಹೊಗಳಿದರು. ರಜನೀಕಾಂತ್, ಕಮಲ್ಹಾಸನ್, ಪ್ರಭಾಸ್, ಕಂಗನಾ ರಣಾವತ್ ಎಲ್ಲರೂ ಮೂವಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಷಬ್ ಅವರಿಗೆ ವಿಶೇಷವಾದ ಇಮೇಜ್ ತಂದುಕೊಟ್ಟಿತು. ಈ ಸಿನಿಮಾದಿಂದ ಬಹಳಷ್ಟು ಜನರು ಪ್ರೇರಿತರಾಗಿದ್ದಾರೆ. ಖ್ಯಾತ ನಟಿಯೊಬ್ಬರು ಸಿನಿಮಾದಿಂದ ಪ್ರೇರಣೆ ಪಡೆದು ಕಾಂತಾರ ಮನೆಯನ್ನೇ ನಿರ್ಮಿಸಲು ಹೊರಟಿದ್ದಾರೆ.
ಫೋರ್ ಮೋರ್ ಶಾಟ್ಸ್ ಪ್ಲೀಸ್ ಖ್ಯಾತಿಯ ನಟಿ ಕೃತಿ ಕುಲ್ಹಾರಿ ಅವರು ಯಾವಾಗಲೂ ವಿಶೇಷ ಹಾಗೂ ವಿಭಿನ್ನ ಆಯ್ಕೆಗಳಿಂದಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಎಲ್ಲರೂ ಫ್ಲಾಟ್, ಬಂಗಲೆ ಖರೀದಿಯಲ್ಲಿ ಬ್ಯುಸಿಯಾಗಿದ್ದರೆ ಈ ನಟಿ ಪ್ರಕೃತಿ ಮನೆಯಲ್ಲಿ ಕಾಂತಾರ ಮನೆ ಕಟ್ಟುತ್ತಿದ್ದಾರೆ.
ನಟಿ ಭೂಮಿ ಪೂಜೆಯ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ತಮ್ಮ ಹೊಸ ಮನೆಯ ನೋಟವನ್ನು ತೋರಿಸಿದ್ದಾರೆ. ನಟಿ ಹೊಸದಾಗಿ ಕಟ್ಟುತ್ತಿರುವ ತಮ್ಮ ಮನೆಗೆ ಕಾಂತಾರ ಎಂದು ಹೆಸರಿಟ್ಟಿದ್ದಾರೆ. ಇದು ಸ್ಯಾಂಡಲ್ವುಡ್ನ ಸೂಪರ್ಹಿಟ್ ಸಿನಿಮಾ ಕಾಂತಾರದಿಂದ ಪ್ರೇರಣೆ ಪಡೆದಿದೆ ಎಂದು ಬೇರೆ ಹೇಳುವ ಅಗತ್ಯವಿಲ್ಲ.
kantara #newbeginnings ಎಂದು ಬರೆದ ನಟಿ ಇದು ನನ್ನ ಹೊಸ ಮನೆಯ ಹೆಸರು. ನಾನು ಮುಂದಿನ ಎರಡು ವರ್ಷದಲ್ಲಿ ಈ ಮನೆಯನ್ನು ಕಟ್ಟಿ ಮುಗಿಸಬೇಕೆಂದು ಬಯಸಿದ್ದೇನೆ. ನಾನು ಈ ಹೆಸರು ಕೇಳಿದ್ದು ಕಾಂತಾರ ಸಿನಿಮಾದಿಂದಲೇ. ಹೆಸರು ನನಗೆ ಇಷ್ಟವಾಯಿತು. ಸಹಬಾಳ್ವೆ ಹಾಗೂ ಪ್ರಕೃತಿ ಮಾತೆಯನ್ನು ಗೌರವಿಸುವ ಕಾನ್ಸೆಪ್ಟ್, ಅದರೊಂದಿಗೆ ಹೊಂದಿಕೊಂಡು ಬಾಳುವ ವಿಚಾರ ಇಷ್ಟವಾಯಿತು. ಕಾಂತಾರ ಎಂದರೆ ಕಾಡು ಎಂದು ಅರ್ಥವಿದೆ ಎಂದು ಕನ್ನಡದ ನನ್ನ ಸ್ನೇಹಿತರೊಬ್ಬರು ಹೇಳಿದರು. ನಾನು ಮಿಸ್ಟಿಕ್ ಆಗಿದ್ದೇನೆ. ನಾನು ಎಲ್ಲಾ ವಿಷಯಗಳಲ್ಲಿ ಅತೀಂದ್ರಿಯದ ಇರುವಿಕೆಯನ್ನು ನಂಬುತ್ತೇನೆ. ಪ್ರಕೃತಿಯಿಂದ ಸುತ್ತುವರಿದ ನನ್ನ ಮನೆಯು ಅದೇ ಶಕ್ತಿಯನ್ನು ಹೊರಹಾಕುತ್ತದೆ ಎಂದಿದ್ದಾರೆ. ನನಗೆ ಮುಂಬೈ ಅಥವಾ ಇನ್ನೊಂದು ನಗರದಲ್ಲಿ ಬದುಕಲು ಇಷ್ಟವಿಲ್ಲ. ಸಿಟಿ ಲೈಫ್ ನನಗೆ ಹೊಂದುವುದಿಲ್ಲ. ನನಗೆ ಪ್ರಕೃತಿ ಮಡಿಲಿನಲ್ಲಿರುವುದು ಇಷ್ಟ ಎಂದಿದ್ದಾರೆ.
ಕೃತಿ ಅವರು ಈ ಹಿಂದೆ ತಮ್ಮ ಕೂದಲು ಕತ್ತರಿಸಿ ಸುದ್ದಿಯಾಗಿದ್ದರು. ಇದಕ್ಕೆ ಕಾರಣ ಕೊಟ್ಟ ನಟಿ ನಾನು ಒಂದು ತಿಂಗಳ ಹಿಂದೆ ಇದನ್ನು ನಿರ್ಧರಿಸಿದೆ. ಈಗ ಮಾಡಿದೆ. ನಾನು ಕೆಲಸ ಮಾಡುವ ಇಂಡಸ್ಟ್ರಿಯಲ್ಲಿ ಹೀರೋಯಿನ್ ಎಂಬ ಪಾತ್ರಕ್ಕೆ ಅದರದ್ದೇ ಆದ ನಿಬಂಧನೆಗಳಿವೆ. ನಾನು ಇಂಡಸ್ಟ್ರಿಯಲ್ಲಿದ್ದು 15 ವರ್ಷದ ನಂತರ ನನಗಿಷ್ಟವಾದ್ದನ್ನು ಮಾಡುತ್ತಿದ್ದೇನೆ. ನಾರ್ಮಲ್ ಅಲ್ಲದೇ ಇರುವುದನ್ನು ಮಾಡಿದಾಗ ನನಗೆ ಶಕ್ತಿ ಬಂದಂತೆನಿಸುತ್ತದೆ. ಈಗ ನನ್ನದೇ ರೀತಿಯಲ್ಲಿ ಬದುಕುವಲ್ಲಿ ಇನ್ನೊಂದು ನಿರ್ಧಾರ ಮಾಡಿದ್ದೇನೆ ಎಂದು ಪೋಸ್ಟ್ ಹಾಕಿದ್ದರು.