ದೆಹಲಿಯ ಶಾಲೆಗೆ ಬಾಂಬ್ ಬೆದರಿಕೆ ಕರೆ – ತೀವ್ರ ಶೋಧ

ನವದೆಹಲಿ: ದಕ್ಷಿಣ ದೆಹಲಿಯ ಪುಷ್ಪ ವಿಹಾರ್ ಪ್ರದೇಶದಲ್ಲಿರುವ ಖಾಸಗಿ ಶಾಲೆಯೊಂದಕ್ಕೆ ಮಂಗಳವಾರ ಬೆಳಗ್ಗೆ ಬೆದರಿಕೆ ಕರೆ ಬಂದಿದೆ. ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ.
ಪುಷ್ಪ ವಿಹಾರ್ ಪ್ರದೇಶದಲ್ಲಿರುವ ಅಮೃತ ಶಾಲೆಗೆ ಬೆಳಗ್ಗೆ 6:35ರ ವೇಳೆಗೆ ಬೆದರಿಕೆಯ ಮೇಲ್ ಬಂದಿದ್ದು, ನಂತರ ಶಾಲೆಯ ಆಡಳಿತ ಪೊಲೀಸರಿಗೆ ಕರೆ ಮಾಡಿ ವಿಚಾರವನ್ನು ತಿಳಿಸಿದೆ. ತಕ್ಷಣ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಜೊತೆಗೆ ಅಂಬುಲೆನ್ಸ್ ಕೂಡಾ ಸ್ಥಳಕ್ಕೆ ತಲುಪಿದೆ.
ಶಾಲೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ತಕ್ಷಣವೇ ಶಾಲೆಯ ಕಟ್ಟಡದಿಂದ ಖಾಲಿ ಮಾಡುವಂತೆ ತಿಳಿಸಲಾಗಿದೆ. ಶಾಲೆಯ ಆವರಣದಲ್ಲಿ ಇದೀಗ ತೀವ್ರ ಶೋಧ ನಡೆಸಲಾಗುತ್ತಿದೆ.

15 ದಿನಗಳ ಹಿಂದಷ್ಟೇ ನಗರದ ದಿ ಡೆಲ್ಲಿ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಕರೆ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು ಶಾಲೆಯನ್ನು ತೆರವುಗೊಳಿಸಿ ಶೋಧ ನಡೆಸಿದ್ದರು. ಆದರೆ ಶಾಲೆಯ ಆವರಣದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿರಲಿಲ್ಲ. ಕೆಲ ಅಪ್ರಾಪ್ತ ವಿದ್ಯಾರ್ಥಿಗಳು ತಮಾಷೆಗೆ ಬೆದರಿಕೆ ಕರೆ ಮಾಡಿದ್ದಾಗಿ ಬಳಿಕ ಪೊಲೀಸರು ತಿಳಿಸಿದ್ದರು.

ಅದಕ್ಕೂ ಮುನ್ನ ದೆಹಲಿಯ ಇನ್ನೊಂದು ಶಾಲೆ ದಿ ಇಂಡಿಯನ್ ಸ್ಕೂಲ್‌ಗೂ ಬೆದರಿಕೆ ಕರೆ ಬಂದಿತ್ತು. ಶಾಲೆಯ ಆವರಣದಲ್ಲಿ ತೀವ್ರ ಶೋಧ ನಡೆಸಿ, ಸ್ವಚ್ಛಗೊಳಿಸದ ಬಳಿಕವೂ ಏನೂ ಸಿಗದ ಹಿನ್ನೆಲೆ ಅದು ಹುಸಿ ಬೆದರಿಕೆ ಕರೆ ಎಂದು ತಿಳಿಸಿದ್ದಾರೆ.