ಹನೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ – ಯಾರಿಗೆ ಒಲಿಯಲಿದೆ ವಿಜಯಮಾಲೆ?

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರ ರಾಜಕೀಯ ಜಿದ್ದಾಜಿದ್ದಿನಲ್ಲಿ ಎರಡು ಮನೆತನಗಳ ನಡುವಿನ ಕಾದಾಟಕ್ಕೆ ಸಾಕ್ಷಿಯಾಗಿತ್ತು. ಆದರೆ ಎರಡು ಮನೆತನಗಳ ಫೈಟ್ ನಡುವೆಯೇ ಈಗ ಮೂರನೇಯವರ ಎಂಟ್ರಿಯಾಗಿದೆ. ಇದೀಗ ಹನೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಸಂಪ್ರದಾಯಿಕವಾಗಿ ದಿ. ರಾಜೂಗೌಡ ಹಾಗೂ ದಿ. ನಾಗಪ್ಪ ಮನೆತನಗಳು ಹಿಂದಿನಿಂದಲೂ ಚುನಾವಣೆಯಲ್ಲಿ ವಿರೋಧಿಗಳಾಗಿ ಹೋರಾಟ ನಡೆಸಿವೆ. ಆದರೆ ಕಳೆದ ಬಾರಿಯ ಚುನಾವಣೆಯಲ್ಲಿ ಈ ಎರಡು ಮನೆತನಕ್ಕೂ ಸಾಕಷ್ಟು ಫೈಟ್ ಕೊಟ್ಟಿದ್ದ ಜೆಡಿಎಸ್ ಅಭ್ಯರ್ಥಿ, ಈ ಬಾರಿ ಅಖಾಡದಲ್ಲಿರುವುದರಿಂದ ಹನೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆದಿದೆ. ಯಾರೇ ಗೆದ್ದರೂ ಕೂದಲೆಳೆ ಅಂತರ ಅನ್ನೋ ಲೆಕ್ಕಾಚಾರ ರಾಜಕೀಯ ಮೊಗಸಾಲೆಯಲ್ಲಿ ಚರ್ಚೆ ಆಗುತ್ತಿದೆ.
ಹನೂರು ಕ್ಷೇತ್ರದಲ್ಲಿ ಗೆದ್ದವರು

1957 – ಜಿ. ವೆಂಕಟೇಗೌಡ (ಪಕ್ಷೇತರ), 1962 – ಜಿ. ವೆಂಕಟೇಗೌಡ (ಪಕ್ಷೇತರ), 1967 – ಹೆಚ್. ನಾಗಪ್ಪ (ಕಾಂಗ್ರೆಸ್), 1972 – ರಾಜೇಗೌಡ (ಕಾಂಗ್ರೆಸ್), 1978 – ಜಿ. ರಾಜೂಗೌಡ (ಕಾಂಗ್ರೆಸ್), 1983 – ಕೆ.ಪಿ. ಶಾಂತಮೂರ್ತಿ (ಕಾಂಗ್ರೆಸ್), 1985 – ಜಿ. ರಾಜೂಗೌಡ (ಪಕ್ಷೇತರ), 1989 – ಜಿ ರಾಜೂಗೌಡ (ಕಾಂಗ್ರೆಸ್), 1994 – ಹೆಚ್. ನಾಗಪ್ಪ (ಜನತಾ ದಳ), 1999 – ಜಿ. ರಾಜೂಗೌಡ (ಕಾಂಗ್ರೆಸ್), 2004 – ಪರಿಮಳಾ ನಾಗಪ್ಪ (ಜೆಡಿಎಸ್), 2008 – ಆರ್. ನರೇಂದ್ರ (ಕಾಂಗ್ರೆಸ್), 2013 – ಆರ್. ನರೇಂದ್ರ (ಕಾಂಗ್ರೆಸ್), 2018 – ಆರ್. ನರೇಂದ್ರ (ಕಾಂಗ್ರೆಸ್).

2018ರ ಚುನಾವಣಾ ಫಲಿತಾಂಶ ಏನಿತ್ತು?

ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶಾಸಕ ಆರ್.ನರೇಂದ್ರ 3,700 ಮತಗಳ ಅಂತರದೊಂದಿಗೆ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದರು. ಇವರು ಒಟ್ಟು 60,444 ಮತ ಗಳಿಸಿದ್ದರು. ಬಿಜೆಪಿಯ ಪ್ರೀತನ್ ನಾಗಪ್ಪ ಅವರು 56,931 ಮತ ಪಡೆದು ಸೋಲನುಭವಿಸಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಂ.ಆರ್.ಮಂಜುನಾಥ್ ಅವರು 44,957 ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿದರು.

ಕಾಂಗ್ರೆಸ್ ಪ್ಲಸ್: ದಲಿತರು, ಲಂಬಾಣಿ, ಒಕ್ಕಲಿಗರ ಮತ ಬ್ಯಾಂಕ್ ಭದ್ರ. ಮನೆತನಕ್ಕೆ ಸಿಗುವ ಸಾಂಪ್ರದಾಯಿಕ ಮತ ಬುಟ್ಟಿ ಉಳಿಸಿಕೊಂಡಿರುವುದು. ಕಾಂಗ್ರೆಸ್ ಸರ್ಕಾರ ಬಂದರೆ ಮಂತ್ರಿ ಯೋಗ. ಮಲೆ ಮಹದೇಶ್ವರ ಹುಲಿ ಯೋಜನೆ ಘೋಷಣೆಗೆ ಪ್ರಬಲವಾಗಿ ವಿರೋಧಿಸಿದ್ದು ಪ್ಲಸ್ ಆಗುವ ಸಾಧ್ಯತೆ ಇದೆ.

ಮೈನಸ್: ಕ್ಷೇತ್ರ ವಿಸ್ತೀರ್ಣ ದೊಡ್ಡದಾಗಿದ್ದು ಮೂಲ ಸೌಕರ್ಯ, ರಸ್ತೆ ಸಮಸ್ಯೆ. ಕಾಡಂಚಿನ ಪ್ರದೇಶಗಳಲ್ಲಿ ಆಸ್ಪತ್ರೆ, ರಸ್ತೆ ಸಮಸ್ಯೆ. ಸಮರ್ಪಕವಾದ ರೀತಿಯಲ್ಲಿ ಅಭಿವೃದ್ಧಿ ಮಾಡಿಲ್ಲವೆಂಬ ಆರೋಪವಿದೆ.