ರಾಮನ ನಾಡಿನಲ್ಲಿ ಚುನಾವಣಾ ಯುದ್ಧ – ಒಕ್ಕಲಿಗರ ಭದ್ರಕೋಟೆಯಲ್ಲಿ ನಿಖಿಲ್ V/S ಇಕ್ಬಾಲ್

ರಾಮನಗರ: ಚುನಾವಣಾ ಕದನ ಕುತೂಹಲ ಹೆಚ್ಚಿಸಿರುವ ರಾಮನಗರ ವಿಧಾನಸಭಾ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ಮರುಜನ್ಮ ನೀಡಿದ್ದ ಈ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಮೊದಲ ಬಾರಿಗೆ ಸ್ಪರ್ಧೆ ಮಾಡ್ತಿದ್ದಾರೆ. ದೇವೇಗೌಡರ ಕುಟುಂಬದ ನಾಲ್ಕನೇ ಅಭ್ಯರ್ಥಿ ನಿಖಿಲ್ ರಾಮನಗರದಿಂದ ತಮ್ಮ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದಾರೆ.
ದೇವೇಗೌಡರಿಂದ ಹಿಡಿದು ಅನಿತಾ ಕುಮಾರಸ್ವಾಮಿವರೆಗೂ ಸೋಲನ್ನು ಕಾಣದಿರುವ ಜೆಡಿಎಸ್ ಪಕ್ಷದಿಂದ ಇದೇ ಮೊದಲ ಬಾರಿಗೆ ನಿಖಿಲ್ ರಂಗ ಪ್ರವೇಶ ಮಾಡುತ್ತಿದ್ದಾರೆ. ಜೊತೆಗೆ ಮಗನಿಗಾಗಿ ಅನಿತಾ ಕುಮಾರಸ್ವಾಮಿ ಕ್ಷೇತ್ರ ತ್ಯಾಗ ಮಾಡಿದ್ದಾರೆ ಎಂಬ ಕಣ್ಣೀರಿನ ಹನಿಗಳು ಸಹ ಜೆಡಿಎಸ್ ಪಾಲಿಗೆ ಪ್ಲಸ್ ಆಗಿವೆ. ಕುಮಾರಸ್ವಾಮಿ ಕುಟುಂಬವನ್ನು ದಶಕಗಳಿಗಿಂತಲೂ ಹೆಚ್ಚಿನ ಕಾಲ ಪೋಷಿಸುತ್ತಿರುವ ಇಲ್ಲಿನ ಮತದಾರರು ನಿಖಿಲ್‌ಗೆ ಅದ್ಧೂರಿ ಸ್ವಾಗತ ಕೋರುತ್ತಿದ್ದಾರೆ.

ಇತ್ತ ಕಾಂಗ್ರೆಸ್‌ನಿಂದ ಇಕ್ಬಾಲ್ ಹುಸೇನ್‌ ಸ್ಪರ್ಧೆ ಮಾಡುತ್ತಿದ್ದು, ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಸಂಸದ ಡಿ.ಕೆ.ಸುರೇಶ್, ಇಕ್ಬಾಲ್ ಹುಸೇನ್ ಬೆನ್ನಿಗೆ ನಿಂತಿರೋದು ಕಾಂಗ್ರೆಸ್‌ಗೆ ಪ್ಲಸ್ ಆಗಲಿದೆ. ಈ ಬಾರಿ ಸಿಎಂ ಕನಸು ಕಾಣುತ್ತಿರುವ ಡಿಕೆಶಿ ತವರು ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ತವಕದಲ್ಲಿದ್ದಾರೆ. ಇನ್ನೂ ಬಿಜೆಪಿಯಿಂದ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷ ಗೌತಮ್‌ ಗೌಡ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಬಾರಿ ಬಿಜೆಪಿ ಹೊಸ ಮುಖಕ್ಕೆ ಮಣೆ ಹಾಕುವ ಮೂಲಕ ಯುವಮತಗಳ ಒಲೈಕೆ ಮಾಡುವ ತಂತ್ರವನ್ನೂ ಮಾಡಿದೆ. ಅಲ್ಲದೇ ರಾಮಮಂದಿರದ ಹೆಸರಿನಲ್ಲಿ ಮತದಾರರ ಮನವೊಲಿಸಲು ಮುಂದಾಗಿರೋ ಬಿಜೆಪಿಗೆ ಮತದಾರ ಪ್ರಭು ಮಣೆ ಹಾಕುತ್ತಾನೋ ಇಲ್ಲವೋ ಎಂಬುದನ್ನ ಕಾದು ನೋಡಬೇಕಿದೆ.

ಕಾಂಗ್ರೆಸ್ ಪ್ಲಸ್‌: ಕೆಪಿಸಿಸಿ ಅಧ್ಯಕ್ಷರ ತವರು ಜಿಲ್ಲೆ, ಇಕ್ಬಾಲ್ ಹುಸೇನ್ ವೈಯಕ್ತಿಕ ವರ್ಚಸ್ಸು, ಡಿಕೆ ಬ್ರದರ್ಸ್‌ ಬೆಂಬಲ, ಅಲ್ಪಸಂಖ್ಯಾತ ಅಭ್ಯರ್ಥಿ (ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಮತಗಳೇ ನಿರ್ಣಾಯಕ), ಕ್ಷೇತ್ರದಲ್ಲಿ ಸಾಂಪ್ರದಾಯಿಕ ಮತಗಳ ಹೊಂದಿದೆ.

ಕಾಂಗ್ರೆಸ್ ಮೈನಸ್: ಹೊಂದಾಣಿಕೆ ರಾಜಕೀಯ, ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ, ಒಕ್ಕಲಿಗರ ಭದ್ರಕೋಟೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿ, ಮಾಜಿ ಸಿಎಂ ಕುಮಾರಸ್ವಾಮಿ ವರ್ಚಸ್ಸು, ಕಾಂಗ್ರೆಸ್ ಸಂಘಟನೆಯಲ್ಲಿ ಕೊರತೆ, ಬಿಜೆಪಿಯ ರಾಮಮಂದಿರ ಅಸ್ತ್ರ..


ಜೆಡಿಎಸ್ ಪ್ಲಸ್‌: ಮಾಜಿ ಸಿಎಂ ಕುಮಾರಸ್ವಾಮಿ ವರ್ಚಸ್ಸು, ಒಕ್ಕಲಿಗರ ಭದ್ರಕೋಟೆ (ಅತಿ ಹೆಚ್ಚು ಒಕ್ಕಲಿಗ ಮತಗಳಿವೆ), ರಾಮನಗರ ಜಿಲ್ಲೆ ಮಾಡಿದ ಕ್ರೆಡಿಟ್, ಕಳೆದ 25 ವರ್ಷಗಳಿಂದ ಜೆಡಿಎಸ್ ನಿರಂತರ ಗೆಲುವು, ಅಭಿವೃದ್ಧಿ.
ಜೆಡಿಎಸ್ ಮೈನಸ್: ಕುಟುಂಬ ರಾಜಕಾರಣ, ಅನಿತಾ ಕುಮಾರಸ್ವಾಮಿ ಕಾಲದಲ್ಲಿ ಅಭಿವೃದ್ಧಿ ಕುಂಠಿತ ಆರೋಪ, ಕ್ಷೇತ್ರದ ಶಾಸಕರು ಜನಸಾಮಾನ್ಯರ ಕೈಗೆ ಸಿಗಲ್ಲ ಎಂಬ ಹಣೆಪಟ್ಟಿ, ಬಿಜೆಪಿ ಪರ ಮೋದಿ ಸೇರಿ ಘಟಾನುಘಟಿ ನಾಯಕರ ಪ್ರಚಾರ, ಬಿಜೆಪಿಯ ರಾಮಮಂದಿರ ಅಸ್ತ್ರ.

ಬಿಜೆಪಿ ಪ್ಲಸ್: ರಾಮಮಂದಿರ ನಿರ್ಮಾಣ ಮೂಲಕ ಹಿಂದೂ ಮತ ಕ್ರೋಢೀಕರಣ, ಜಿಲ್ಲೆಗೆ ಹೆಚ್ಚು ಅನುದಾನ ಘೋಷಣೆ ಮಾಡಿ ಮತದಾರರ ಓಲೈಕೆ, ಈ‌ ಬಾರಿ ರಾಮನಗರ ಜಿಲ್ಲೆ ಟಾರ್ಗೆಟ್ ಮಾಡಿರೋ ಹೈಕಮಾಂಡ್, ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗೆ ಮಣೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಅವಕಾಶ ಕೊಟ್ಟಿದ್ದೀರಿ ಬಿಜೆಪಿಗೆ ಅವಕಾಶ ಕೊಡಿ ಎಂಬ ಮಾತು, ಜೆಡಿಎಸ್ ಹಾಗೂ ಕಾಂಗ್ರೆಸ್ ವೈಫಲ್ಯಗಳ ಎತ್ತಿಹಿಡಿಯುತ್ತಿರುವುದು, ಪ್ರಧಾನಿ ಮೋದಿ ಹಾದಿಯಾಗಿ ಘಟಾನುಘಟಿ ನಾಯಕರಿಂದ ಪ್ರಚಾರ.
ಬಿಜೆಪಿ ಮೈನಸ್: ಕ್ಷೇತ್ರದಲ್ಲಿ ಸಂಘಟನೆ ಕೊರತೆ, ಕಾರ್ಯಕರ್ತರಲ್ಲಿ ಬಣ ರಾಜಕೀಯ. ಹೊಸ ಮುಖಕ್ಕೆ ಮಣೆ ಹಾಕಿರೋದು, ಇತಿಹಾಸದಲ್ಲಿ ಒಂದು ಬಾರಿಯೂ ಗೆದ್ದಿಲ್ಲ, ನಿರ್ಣಾಯಕ ಪಾತ್ರವಹಿಸೋ ಅಲ್ಪಸಂಖ್ಯಾತ ಮತಗಳು ಕೈತಪ್ಪುವ ಆತಂಕ.